ವಿಶ್ವದ ಅಗ್ರ ಶ್ರೇಯಾಂಕಿತೆ ಪೋಲೆಂಡ್ ನ ಇಗಾ ಸ್ವೆಟೆಕ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದರೆ, ಪುರುಷರ ಸಿಂಗಲ್ಸ್ ನಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಇಗಾ ಸ್ವೆಟೆಕ್ 6-2, 6-1 ರಿಂದ 20ನೇ ಶ್ರೇಯಾಂಕಿತ ಡೇರಿಯಾ ಕಸಟ್ಕಿನಾ ಅವರನ್ನು ಎರಡು ನೇರ ಸೆಟ್ ಗಳಲ್ಲಿ ಮಣಿಸಿ ಮುನ್ನಡೆದರು. ಒಂದು ಗಂಟೆ ನಾಲ್ಕು ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿ, ಎರಡನೇ ಬಾರಿಗೆ ಫ್ರೆಂಚ್ ಓಪನ್ ಎತ್ತುವ ಕನಸು ಕಾಣುತ್ತಿದ್ದಾರೆ. ಇದಕ್ಕೂ ಮೊದಲು 2020ರಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದರು. ಕಳೆದ ವರ್ಷ ಕ್ವಾರ್ಟರ್ ಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದ ಇಗಾ, ಈ ಬಾರಿ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಫೈನಲ್ ತಲುಪುವ ಡೇರಿಯಾ ಕಸಟ್ಕಿನಾ ಕನಸು ನುಚ್ಚುನೂರಾಗಿದೆ.

ಬುಧವಾರ ತಡ ರಾತ್ರಿ ಫಿಲಿಪ್-ಚಾಟ್ರಿಯರ್ ಕೋರ್ಟ್ನಲ್ಲಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ 6-1, 4-6, 7(7)-6(2), 6-3 ರಿಂದ ಡೆನ್ಮಾರ್ಕ್‌ನ ಹೊಲ್ಗರ್ ರೂನ್ ಅವರನ್ನು ಮಣಿಸಿದರು. ರೂಡ್ ಇದೆ ಮೊದಲ ಬಾರಿಗೆ ಪ್ರತಿಷ್ಠಿತ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಸೆಮಿಫೈನಲ್ ಹಂತ ಕಂಡಿದ್ದಾರೆ.ಇದಕ್ಕೂ ಮೊದಲು 2021ರಲ್ಲಿ ಇವರು ಆಸ್ಟ್ರೇಲಿಯಾ ಓಪನ್ ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು.