ಬಲಗೈ ಮಧ್ಯಮ ವೇಗಿ 23 ವರ್ಷದ ಮ್ಯಾಥ್ಯೂ ಪಾಟ್ಸ್ ಪದಾರ್ಪಣೆ ಪಂದ್ಯದಲ್ಲಿ ಅಮೋಘ ಬೌಲಿಂಗ್ ನಡೆಸಿ ಇಂಗ್ಲೆಂಡ್ ಗೆ ನೆರವಾಗಿದ್ದಾರೆ. ಗುರುವಾರದಿಂದ ಲಾರ್ಡ್ಸ್ ಅಂಗಳದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ನ್ಯೂಜಿಲೆಂಡ್ 132 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿದಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿತು. ಟಾಮ್ ಲಾಥಮ್ (1), ವಿಲ್ ಯಂಗ್ (1), ಕೇನ್ ವಿಲಿಯಮ್ಸನ್ (2), ಡೇವನ್ ಕಾನ್ವೆ (3) ರನ್ ಕಲೆ ಹಾಕಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ ಕೊಂಚ ಭರವಸೆ ಮೂಡಿಸಿದರೂ ಇವರ ಆಟ 11 ರನ್ ಗಳಿಗೆ ಸೀಮಿತವಾಯಿತು. ಟಾಮ್ ಬ್ಲಂಡೆಲ್ (14) ಸಹ ಹೆಚ್ಚಿನ ಕಾಣಿಕೆ ನೀಡಲಿಲ್ಲ.

45 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಹಾಗೂ ಟೀಮ್ ಸೌಥಿ ಆಧಾರವಾದರು. ಈ ಜೋಡಿ 36 ಎಸೆತಗಳಲ್ಲಿ 41 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ಟೀಮ್ ಸೌಥಿ 4 ಬೌಂಡರಿ ನೆರವಿನಿಂದ 26 ರನ್ ಬಾರಿಸಿದರು.

ಕಾಲಿನ್ ಡಿ ಗ್ರ್ಯಾಂಡ್ ಹೋಮ್ 4 ಬೌಂಡರಿ ನೆರವಿನಿಂದ ಅಜೇಯ 42 ರನ್ ಬಾರಿಸಿದರು. ಇವರಿಗೆ ಯಾವೊಬ್ಬ ಬ್ಯಾಟ್ಸ್‌ಮನ್ ಉತ್ತಮ ಸಾಥ್ ನೀಡಲಿಲ್ಲ.

ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಹಾಗೂ ಮ್ಯಾಥ್ಯೂ ಪಾಟ್ಸ್ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.