ಅನಧಿಕೃತ ಟೆಸ್ಟ್: ಭಾರತ ‘ಎ’ ಹಾಗೂ ನ್ಯೂಜಿಲೆಂಡ್ `ಎ’ ಪಂದ್ಯ ಡ್ರಾ
ಆತಿಥೇಯ ಭಾರತ `ಎ’ ಹಾಗೂ ಪ್ರವಾಸಿ ನ್ಯೂಜಿಲೆಂಡ್ `ಎ’ ನಡುವೆ ಹುಬ್ಬಳ್ಳಿಯ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಎರಡನೇ ಅನಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ.
ಮೂರನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾದರೆ, ನಾಲ್ಕನೇ ಹಾಗೂ ಅಂತಿಮ ದಿನವಾದ ಇಂದು ಆಟಕ್ಕಿಂತ ಮಳೆ ಆಟವೇ ಜೋರಾಯಿತು. ಒದ್ದೆಯಾದ ಪಿಚ್ ಹಾಗೂ ಆಗಾಗ ಬೀಳುತ್ತಿದ್ದ ತುಂತುರು ಮಳೆಯಿಂದ ದಿನದಾಟ ವಿಳಂಬವಾಗಿ ಆರಂಭವಾಯಿತು. ದಿನದ ಆಟ ಆರಂಭವಾಗುತ್ತಿದ್ದಂತೆ ಭಾರತ, ತನ್ನ ಮೊದಲ ಇನ್ನಿಂಗ್ಸ್ ಎರಡನೇ ದಿನದ ಅಂತ್ಯದಲ್ಲಿ ಸೇರಿಸಿದ್ದ ಆರು ವಿಕೆಟ್ ನಷ್ಟಕ್ಕೆ 226 ರನ್ಗೆ ಆಟ ಬಿಟ್ಟುಕೊಟ್ಟಿತು.
ನಂತರ ನ್ಯೂಜಿಲೆಂಡ್ `ಎ’ ತಂಡಕ್ಕೆ 12.5 ಓವರ್ಗಳ ಬ್ಯಾಟಿಂಗ್ ಮಾಡಲು ಮಾತ್ರ ಸಾಧ್ಯವಾಯಿತು. ಈ ಅವಧಿಯಲ್ಲಿ ಪ್ರವಾಸಿ ತಂಡ ಎರಡು ವಿಕೆಟ್ ನಷ್ಟಕ್ಕೆ 39 ರನ್ ಸೇರಿಸಿತ್ತು.
ಜೋ ಕಾರ್ಟರ್ 17 ಹಾಗೂ ಡೇನ್ ಕ್ಲೀವರ್ 1 ರನ್ ಮಾಡಿ ಕ್ರಮವಾಗಿ ಮುಕೇಶ ಕುಮಾರ್ ಹಾಗೂ ಶಾರ್ದುಲ್ ಠಾಕೂರ್ಗೆ ಬಲಿಯಾದರು. ರಚಿನ್ ರವೀಂದ್ರ 14 ಅಜೇಯರಾಗಿ ಉಳಿದರು.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಪಿಚ್ ಒದ್ದೆಯಾಗಿದ್ದ ಕಾರಣ ರದ್ದಾಗಿತ್ತು. ಎರಡನೇ ದಿನದಾಟ ಕೂಡ ಒಂದು ಗಂಟೆ ತಡವಾಗಿ ಆರಂಭವಾಗಿ 66 ಓವರ್ಗಳ ಆಟ ಮಾತ್ರ ಸಾಧ್ಯವಾಯಿತು. ಸುಮಾರು ಮೂರು ವರ್ಷಗಳ ನಂತರ ನಗರದಲ್ಲಿ ಆಯೋಜಿಸಿದ್ದ ಪ್ರಮುಖ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಕ್ರಿಕೆಟ್ ಪ್ರೇಮಿಗಳನ್ನು ತೀವ್ರ ನಿರಾಸೆಗೊಳಿಸಿತು.
Unofficial Test, India A, New Zealand A