ಕೂಲಿಡ್ಜ್ನಲ್ಲಿ (Coolidge) ಭಾರತ (India) ತಂಡ ಅಂದುಕೊಂಡಿದ್ದು ಎಲ್ಲವೂ ನಡೆಯಿತು. ಮಧ್ಯಮ ಸರದಿ ಬ್ಯಾಟಿಂಗ್ ತಂಡಕ್ಕೆ ಶಕ್ತಿ ನೀಡಿದರೆ, ಕೆಳ ಸರದಿ ಫಿನಿಷಿಂಗ್ ಟಚ್ ಕೊಟ್ಟಿತು. ಬೌಲರ್ಗಳು ಆಸ್ಟ್ರೇಲಿಯಾದ (Australia) ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಅನ್ನು ಕಟ್ಟಿ ಹಾಕಿದರು. ಸಾಂಘೀಕ ಹೋರಾಟ ಭಾರತವನ್ನು ಅಂಡರ್ 19 ವಿಶ್ವಕಪ್ನಲ್ಲಿ (Under19 World Cup) ಸತತ 4ನೇ ಬಾರಿಗೆ ಫೈನಲ್ ತಲುಪಿಸಿತು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಆಸ್ಟ್ರೇಲಿಯಾದ ಕರಾರುವಕ್ ದಾಳಿಯಿಂದ ರನ್ಗಳು ಬರಲಿಲ್ಲ. ಈ ಮಧ್ಯೆ ಅಂಗ್ಕ್ರಿಷ್ ರಘುವಂಶಿ (6) ಮತ್ತು ಹರ್ನೂರ್ ಸಿಂಗ್ (16) ಔಟಾದರು. ಸಂಕಷ್ಟದಲ್ಲಿದ್ದ ತಂಡವನ್ನು ಕಾಪಾಡಿದ್ದು ನಾಯಕ ಯಶ್ ಧುಲ್ ಮತ್ತು ಉಪನಾಯಕ ಶೇಕ್ ರಶೀದ್.
ಆರಂಭದಲ್ಲಿ ಈ ಜೋಡಿ ನಿಧಾನವಾಗಿ ಆಡಿತು. ಆದರೆ ಸೆಟ್ ಆದ ಮೇಲೆ ಬೌಂಡರಿಗಳ ಸುರಿಮಳೆ ಆಯಿತು. 3ನೇ ವಿಕೆಟ್ಗೆ ಈ ಜೋಡಿ 204 ರನ್ಗಳನ್ನು ಸೇರಿಸಿ ದೊಡ್ಡ ಮೊತ್ತಕ್ಕೆ ಬುನಾದಿ ಹಾಕಿಕೊಟ್ಟಿತು. ಕ್ಯಾಪ್ಟನ್ ಧುಲ್ ಶತಕ ಬಾರಿಸಿದರು. ಅಂತಿಮವಾಗಿ ಧುಲ್ 110 ರನ್ಗಳಿಸಿ ಔಟಾದರು. ರಶೀದ್ ಕೂಡ ಉತ್ತಮ ಆಟ ಆಡಿದರು. ಆದರೆ 94 ರನ್ಗಳಿಸಿದ್ದಾಗ ಔಟಾಗಿ ಶತಕ ವಂಚಿತರಾದರು.
ರಾಜ್ವರ್ಧನ್ ಹಂಗರ್ಗೇಕರ್ ಭಡ್ತಿ ಪಡೆದು ಬಂದರೂ 13 ರನ್ಗಳಿಗಿಂತ ಮುಂದೆ ಹೋಗಲಿಲ್ಲ. ನಿಶಾಂತ್ ಸಿಂಧು ಮತ್ತು ದಿನೇಶ್ ಬಾನ ಫಿನಿಷಿಂಗ್ ಟಚ್ ನೀಡಿದರು. ಬಾನಾ ಕೇವಲ 4 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಫೋರ್ಗಳ ನೆರವಿನಿಂದ ಅಜೇಯ 20 ರನ್ಗಳಿಸಿದರೆ, ಸಿಂಧು, 10 ಎಸೆತಗಳಲ್ಲಿ 12 ರನ್ಗಳಿಸಿದರು. 50 ಓವರುಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 290 ರನ್ಗಳಿಸಿತು.
ದೊಡ್ಡ ಗುರಿ ಬೆನ್ನಟ್ಟ ಹೊರಟ ಕಾಂಗರು ಹುಡುಗರಿಗೆ ಆರಂಭದಲ್ಲೇ ಆಘಾತ ಎದುರಾಯಿತು. ರವಿ ಕುಮಾರ್ ಟೀಗ್ ವಿಲ್ಲಿ ಆಟವನ್ನು 1 ರನ್ಗೆ ಅಂತ್ಯಗೊಳಿಸಿದರು. ಕೊರಿ ಮಿಲ್ಲರ್ ಮತ್ತು ಕ್ಯಾಂಬೆಲ್ ಕೆಲ್ಲವೇ 68 ರನ್ಗಳ ಜೊತೆಯಾಟ ತಂದು ಅಪಾಯಕಾರಿಯಾಗಿ ಕಂಡರು. ಆದರೆ ನಾಯಕ ಧುಲ್ ರಘುವಂಶಿ ಕೈಗೆ ಚೆಂಡು ನೀಡಿ ಬ್ರೇಕ್ ಪಡೆದರು. ರಘುವಂಶಿ 38 ರನ್ಗಳಿಸಿದ್ದ ಮಿಲ್ಲರ್ ವಿಕೆಟ್ ಪಡೆದರು. ಮತ್ತೊಂದು ಕಡೆಯಲ್ಲಿ ಒಸ್ಟ್ವಾಲ್ 30 ರನ್ಗಳಿಸಿದ್ದ ಕೆಲ್ಲವೇ ವಿಕೆಟ್ ಪಡೆದರು. ನಿಶಾಂತ್ ಸಿಂಧು ಕ್ಯಾಪ್ಟನ್ ಕೂಪರ್ ಕೊನೊಲಿ ಮತ್ತು ನಿವೇಥನ್ ರಾಧಾಕೃಷ್ಣನ್ ವಿಕೆಟ್ ಪಡೆದು ಆಸೀಸ್ ಓಟಕ್ಕೆ ಬ್ರೇಕ್ ಹಾಕಿದರು.
ಓಸ್ಟ್ವಾಲ್ ವಿಲಿಯಂ ಸಾಲ್ಸ್ಮನ್ ಮತ್ತು ತೊಬಿಯಸ್ ಸ್ನೆಲ್ ವಿಕೆಟ್ ಪಡೆದು ಆಸೀಸ್ ಬೆನ್ನೆಲುಬು ಮುರಿದರು. ಈ ನಡುವೆ ಲಚ್ಲನ್ ಷಾ ಮತ್ತು ಜಾಕ್ ಸೈನ್ಫಿಲ್ಡ್ ಆಟಕ್ಕೆ ನಿಂತರು. ಸೈನ್ಫೀಲ್ಡ್ 14 ಎಸೆತಗಳಲ್ಲಿ 20 ರನ್ಗಳಿಸಿದ್ದಾಗ ಸ್ಟಂಪ್ ಔಟ್ ಆದರು. ಲಚ್ಲನ್ 51 ರನ್ಗಳಿಸಿ 9ನೇಯವರಾಗಿ ಔಟಾದರು. 19 ರನ್ಗಳಿಸಿದ್ದ ಟಾಮ್ ವಿಟ್ನಿ ರನೌಟ್ ಆಗುವುದರೊಂದಿಗೆ ಆಸೀಸ್ 41.5 ಓವರುಗಳಲ್ಲಿ 194 ರನ್ಗಳಿಗೆ ಆಲೌಟ್ ಆಯಿತು. ಓಸ್ಟ್ವಾಲ್ 3 ವಿಕೆಟ್ ಪಡೆದರೆ, ರವಿ ಕುಮಾರ್ ಮತ್ತು ನಿಶಾಂತ್ ಸಿಂಧು ತಲಾ 2 ವಿಕೆಟ್ ಪಡೆದರು. ಭಾರತ 96 ರನ್ಗಳ ಭರ್ಜರಿ ಜಯ ದಾಖಲಿಸಿ 8 ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿತು. ಪ್ರಶಸ್ತಿ ಸುತ್ತಿನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.