ವೆಸ್ಟ್ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯುವ ಏಕದಿನ ಹಾಗೂ ಟಿ20 ಸರಣಿಗೆ ಟೀಮ್ ಇಂಡಿಯಾ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಆಟಗಾರರು ಏಕದಿನ ಸರಣಿ ನಡೆಯುವ ಅಹ್ಮದಾಬಾದ್ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಮಹಾಮಾರಿ ಕೊರೊನಾ ಟೀಮ್ ಇಂಡಿಯಾದ ಬಯೋ ಬಬಲ್ ಒಳಗೆ ಕಾಣಿಸಿಕೊಂಡಿದೆ. ನಾಲ್ವರು ಆಟಗಾರರು, ಮೂವರು ಸಪೋರ್ಟ್ ಸ್ಟಾಫ್ ಸೇರಿದಂತೆ 7 ಜನರಿಗೆ ಕೊರೊನಾ ತಗುಲಿದೆ.
ಆರಂಭಿಕ ಆಟಗಾರರಾದ ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮತ್ತು ರಿಸರ್ವ್ ಬೌಲರ್ ನವದೀಪ್ ಸೈನಿ ಕೊರೊನಾ ಸೋಂಕಿತರಾಗಿದ್ದಾರೆ. ಇವರ ಜೊತೆಗೆ ಫೀಲ್ಡಿಂಗ್ ಕೋಚ್ಮ ಸೆಕ್ಯುರಿಟಿ ಆಫೀಸರ್ ಮತ್ತು ಥೆರಪಿಸ್ಟ್ ಕೂಡ ಸೋಂಕಿತರ ಪಟ್ಟಿಯಲ್ಲಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಬಿಸಿಸಿಐ ಮಯಾಂಕ್ ಅಗರ್ವಾಲ್ ಅವರನ್ನು ಬ್ಯಾಕ್ಅಪ್ ಆಟಗಾರನಾಗಿ ತಂಡ ಸೇರಿಕೊಳ್ಳುವಂತೆ ಸೂಚಿಸಿದೆ.
ಜನವರಿ 31ರಂದು ಟೀಮ್ ಇಂಡಿಯಾ ಅಹ್ಮದಾಬಾದ್ಗೆ ಆಗಮಿಸಿತ್ತು. ಅಂದೇ ಧವನ್ಮತ್ತು ಸೈನಿ ಜೊತೆಗೆ ಫೀಲ್ಡಿಂಗ್ ಕೋಚ್ ಮತ್ತು ಸೆಕ್ಯುರಿಟಿ ಆಫೀಸರ್ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಪಾಸಿಟಿವ್ ಆಗಿದ್ದರು. ಗಾಯಕ್ವಾಡ್ ಜನವರಿ 31 ರಂದು ನಡೆದ ಟೆಸ್ಟ್ನಲ್ಲಿ ನೆಗೆಟಿವ್ ಆಗಿದ್ದರೆ, ಫೆಬ್ರವರಿ 1 ರಂದು ನಡೆದ ಟೆಸ್ಟ್ನಲ್ಲಿ ಪಾಸಿಟಿವ್ ಆಗಿದ್ದರು. ಶ್ರೇಯಸ್ ಅಯ್ಯರ್ ಮತ್ತು ಥೆರಪಿಸ್ಟ್ ಬುಧವಾರ ಪಾಸಿಟಿವ್ ಆಗಿದ್ದಾರೆ.
ಭಾರತ ಮತ್ತು ವೆಸ್ಟ್ಇಂಡೀಸ್ ತಂಡಗಳು ಒಂದೇ ಹೊಟೇಲ್ನಲ್ಲಿ ವಾಸ್ತವ್ಯ ಹೂಡಿದ್ದರೂ ಬೇರೆ ಬೇರೆ ಮಹಡಿಗಳಲ್ಲಿವೆ. ಬಿಸಿಸಿಐ ನಿಯಮದ ಪ್ರಕಾರ ಪಾಸಿಟಿವ್ ಬಂದ ಆಟಗಾರರು 7 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಎರಡೂ ತಂಡಗಳ ಆಟಗಾರರು 3 ದಿನಗಳ ಕಾಲ ಐಸೋಲೇಷನ್ನಲ್ಲಿರಬೇಕಾಗಿದೆ.
ಧವನ್, ಅಯ್ಯರ್ ಮತ್ತು ಗಾಯಕ್ವಾಡ್ ಸಂಪೂರ್ಣ ಏಕದಿನ ಸರಣಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಟಿ20 ವೇಳೆ ಫಿಟ್ ಆಗಬಹುದು. ಈ ನಡುವೆ ಸಹೋದರಿಯ ಮದುವೆಯ ಕಾರಣದಿಂದ ಉಪನಾಯಕ ಕೆ.ಎಲ್. ರಾಹುಲ್ ಮೊದಲ ಏಕದಿನ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ದೀಪಕ್ ಹೂಡ ರೂಪದಲ್ಲಿ ಬ್ಯಾಟ್ಸ್ಮನ್ಗಳನ್ನು ಹೊಂದಿದೆ. ಅಗರ್ವಾಲ್ ಮೊದಲ ಪಂದ್ಯವನ್ನು ಕ್ವಾರಂಟೈನ್ ನಿಯಮದ ಕಾರಣದಿಂದ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೋವಿಡ್ ಪ್ರಕರಣಗಳು ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿವೆ.