19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ತಲುಪಿದೆ.
ಟೂರ್ನಿಯಲ್ಲಿ ಭಾರತ ತಂಡ 10ನೇ ಬಾರಿ ಈ ಕೊನೆಯ ನಾಲ್ಕರ ಘಟ್ಟ ತಲುಪಿದೆ. ಭಾರತ ಈಗ ಫೆಬ್ರವರಿ 2 ರಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯವು ಆಂಟಿಗುವಾದ ಕೂಲೀಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನವನ್ನು ಸೋಲಿಸಿತು. ಫೆಬ್ರವರಿ 1 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಫ್ಘಾನಿಸ್ತಾನವನ್ನು ಕಾದಾಟ ನಡೆಸಲಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 37.1 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ರವಿಕುಮಾರ್ ಮಾರಕ ದಾಳಿ ನಡೆಸಿ ಮೂರು ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ಭಾರತ 30.5 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೌಶಲ್ ತಾಂಬೆ 31ನೇ ಓವರ್ ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಭಾರತಕ್ಕೆ ಗೆಲುವಿನ ಮಾಲೆ ತೊಡಿಸಿದರು. ರವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಆರಂಭಿಕರಾದ ಅಂಗ್ ಕೃಶ್ ರಘುವಂಶಿ 44 ರನ್ ಗಳಿಸಿದರು. ಶೇಖ್ ರಶೀದ್ 26 ಮತ್ತು ನಾಯಕ ಯಶ್ ಧುಲ್ ಔಟಾಗದೆ 20 ರನ್ ಗಳಿಸಿದರು. ಭಾರತ ತಂಡ ಒಂದು ಬಾರಿಗೆ ಒಂದು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತ್ತು. ಆದರೆ, ನಂತರ 27 ರನ್ ಸೇಸಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಾದ ಬಳಿಕ ಯಶ್ ಧುಲ್ ಮತ್ತು ಕೌಶಲ್ ತಾಂಬೆ ಬಿರುಸಿನ ಆಟವಾಡಿ ಮಿಂಚಿದರು. ತಾಂಬೆ 11 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭ ಕಳಪೆಯಾಗಿತ್ತು. ಎರಡನೇ ಓವರ್‌ನಲ್ಲಿ ರವಿಕುಮಾರ್ ಅವರು ಮಹ್ಫಿಜುಲ್ ಇಸ್ಲಾಂ (2) ಬೌಲ್ಡ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಶಾಕ್ ನೀಡಿದರು. ಇಫ್ತಾಖರ್ ಹೊಸೈನ್ ಇಫ್ತಿ (1) ಹಾಗೂ ಪ್ರತೀಕ್ ನವ್ರೋಜ್ (7) ಅವರಿಗೆ ಖೆಡ್ಡಾ ತೋಡಿದ ರವಿ ಅಬ್ಬರಿಸಿದರು.
16ನೇ ಓವರ್‌ನಲ್ಲಿ ವಿಕ್ಕಿ ಓಸ್ತ್ವಾಲ್ ನಾಲ್ಕು ಎಸೆತಗಳಲ್ಲಿ ಅರಿಫುಲ್ ಇಸ್ಲಾಂ (9) ಮತ್ತು ಮೊಹಮ್ಮದ್ ಫಹೀಮ್ (0) ಅವರ ವಿಕೆಟ್‌ಗಳನ್ನು ಕಬಳಿಸಿದರು. ನಾಯಕ ರಕಿಬುಲ್ ಹಸನ್ (7) ಕೌಶಲ್ ತಾಂಬೆ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಐಚ್ ಮೊಲ್ಲಾ (17) ರನ್ ಗಳಿಸಿ ರನೌಟ್ ಆದರು.
ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡ ಸತತ ನಾಲ್ಕನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡ 2018ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿತ್ತು. ತಂಡ 2016 ಮತ್ತು 2020ರಲ್ಲಿ ಫೈನಲ್‌ನಲ್ಲಿ ಸೋತಿತ್ತು.