Under – 19 world cup 2022 – ಕ್ವಾರ್ಟರ್ ಫೈನಲ್ ನಲ್ಲಿ ಭಾರತ – ಬಾಂಗ್ಲಾ ಕಾದಾಟ
19 ವಯೋಮಿತಿ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಹೋರಾಟ ನಡೆಸಲಿವೆ.
ಜನವರಿ 29ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತದ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.
2020ರ ವಿಶ್ವಕಪ್ ಟೂರ್ನಿಯ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತ ತಂಡಕ್ಕೆ ಉತ್ತಮ ಅವಕಾಶ ಸಿಕ್ಕಿದೆ.. 2020ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿ ಮೊದಲ ಬಾರಿ ಬಾಂಗ್ಲಾ ದೇಶ ಪ್ರಶಸ್ತಿ ಗೆದ್ದುಕೊಂಡಿತ್ತು.
ಲೀಗ್ ನಲ್ಲಿ ಐರ್ಲೆಂಡ್ ವಿರುದ್ದದ ಪಂದ್ಯದ ವೇಳೆ ಭಾರತ ತಂಡ ಆಘಾತ ಅನುಭವಿಸಿತ್ತು. ತಂಡದ ಆರು ಮಂದಿ ಆಟಗಾರರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು. ಹೀಗಾಗಿ 11 ಮಂದಿ ಆಟಗಾರರನ್ನು ಇಟ್ಟುಕೊಂಡು ಐರ್ಲೆಂಡ್ ವಿರುದ್ದ ಜಯ ಸಾಧಿಸಿತ್ತು. ಹಾಗೇ ಉಗಾಂಡ ವಿರುದ್ದವೂ ಭರ್ಜರಿ ಜಯ ದಾಖಲಿಸಿತ್ತು. ಲೀಗ್ ನ ಮೊದಲ ಪಂದ್ಯದಲ್ಲಿ ದಕ್ಷಿನ ಆಫ್ರಿಕಾ ವಿರುದ್ದ ಗೆಲುವು ಸಾಧಿಸಿತ್ತು.
ಇದೀಗ ಅಜೇಯ ತಂಡವಾಗಿರುವ ಭಾರತ ತಂಡ ಮಹತ್ವದ ಕ್ವಾರ್ಟರ್ ಫೈನಲ್ ನಲ್ಲಿ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ.
ತಂಡದ ಬಹುತೇಕ ಆಟಗಾರರು ಫಿಟ್ ಆಗಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ತಂಡದ ಪ್ರಮುಖ ಆಟಗಾರರು ಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಯುಎಇನಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಲ್ಲದೆ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿತ್ತು.
ಭಾರತದ ತಂಡದ ನಾಯಕ ಯಶ್ ಧೂಳ್ ಮತ್ತು ಉಪನಾಯಕ ರಶೀದ್ ಅವರು ತಂಡವನ್ನು ಸೇರಿಕೊಂಡಿರುವುದರಿಂದ ಬ್ಯಾಟಿಂಗ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಆಂಗ್ ಕ್ರಿಶ್ ರಘುವಂಶಿ ಮತ್ತು ರಾಜ್ ಬಾವಾ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಯುವ ಸ್ಪಿನ್ನರ್ ಗಳಾದ ವಿಕ್ಕಿ ಒಸ್ಟ್‍ವಾಲ್ ಮತ್ತು ಸಿಂಧೂ ಅವರು ಕೂಡ ಅತ್ಯುತ್ತಮ ಲಯದಲ್ಲಿದ್ದಾರೆ.