ನಾರ್ತ್ಸೌಂಡ್ನಲ್ಲಿ (North Sound) ಕಿರಿಯರ ವಿಶ್ವಕಪ್ ಸೆಮಿಫೈನಲ್ ಪಂದ್ಯ ರೋಚಕತೆ ಹುಟ್ಟಿಸಿತ್ತು. ಅಫ್ಘಾನಿಸ್ತಾನ ಇನ್ನೇನು ಶಾಕಿಂಗ್ ರಿಸಲ್ಟ್ ಕೊಡುತ್ತೆ ಅನ್ನುವಾಗಲೇ ಇಂಗ್ಲೆಂಡ್ ಹೋರಾಟ ಮಾಡಿ ಪಂದ್ಯ ಗೆದ್ದುಕೊಂಡಿತು. ಡಕ್ವರ್ತ್ ನಿಯಮದಂತೆ 15 ರನ್ಗಳ ಜಯ ದಾಖಲಿಸಿದ ಇಂಗ್ಲೆಂಡ್ ಹುಡುಗರು ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.
ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆರಿಸಿಕೊಂಡರೂ ರನ್ ಬರಲಿಲ್ಲ. ಜೇಕಬ್ ಬಾಥೆಲ್ (2), ನಾಯಕ ಟಾಮ್ ಪ್ರೆಸ್ಟ್ (17), ಜೇಮ್ಸ್ ರೀವ್ (12) ಮತ್ತು ವಿಲಿಯಂ ಲಕ್ಸ್ಟನ್ (11) ಬೇಗನೆ ಔಟಾದರು. ಜಾರ್ಜ್ ಥಾಮಸ್ 69 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. 106 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಕೆಳ ಸರದಿಯ ಆಟಗಾರರ ನೆರವಿನಿಂದ ಚೇತರಿಕೆ ಕಂಡಿತು.
ಜಾರ್ಜ್ ಬೆಲ್ ಮತ್ತು ರೆಹಾನ್ ಅಹ್ಮದ್ ಸಣ್ಣ ಜೊತೆಯಾಟ ಕಟ್ಟಿದರು. ಆದರೆ ರೆಹಾನ್ 16 ರನ್ಗಳಿಸಿ ಔಟಾದರು. ಮಳೆ ಪಂದ್ಯಕ್ಕೆ ಅಡ್ಡಿ ಮಾಡಿದ್ದರಿಂದ ಇನ್ನಿಂಗ್ಸ್ ಅನ್ನು 47 ಓವರುಗಳಿಗೆ ಕಡಿತ ಮಾಡಲಾಯಿತು. ಸ್ಲಾಗ್ ಓವರುಗಳಲ್ಲಿ ಜಾರ್ಜ್ ಬೆಲ್ ಮತ್ತು ವಿಕೆಟ್ ಕೀಪರ್ ಅಲೆಕ್ಸ್ ಹೊರ್ಟನ್ ಅಫ್ಘಾನ್ ಬೌಲರ್ಗಳ ಚಳಿ ಬಿಡಿಸಿದರು. ಜಾರ್ಜ್ ಬೆಲ್ 67 ಎಸೆತಗಳಲ್ಲಿ ಅಜೇಯ 56 ರನ್ಗಳಿಸಿದರೆ, ಹೊರ್ಟನ್ ಕೇವಲ 36 ಎಸೆತಗಳಲ್ಲಿ ಅಜೇಯ 53 ರನ್ ಸಿಡಿಸಿದರು. ಇಂಗ್ಲೆಂಡ್ 47 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 231 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದ ಅಫ್ಘಾನಿಸ್ತಾನ ಮೊದಲ ಓವರ್ನಲ್ಲಿ ಖರೋಟ್ ವಿಕೆಟ್ ಕಳೆದುಕೊಂಡಿತು. ಆದರೆ ಮೊಹಮ್ಮದ್ ಇಸಾಕ್ ಮತ್ತು ಅಲ್ಲಾ ನೂರ್ 94 ರನ್ಗಳ ಜೊತೆಯಾಟ ಆಡಿದರು. ಇಸಾಕ್ 43 ರನ್ಗಳಿಸಿ ರನೌಟ್ ಬಲೆಯಲ್ಲಿ ಬಿದ್ದರು. ನಾಯಕ ಸುಲಿಮನ್ ಸಫಿ ಖಾತೆ ತೆರೆಯದೆ ಔಟಾದರು. 60 ರನ್ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಅಲ್ಲಾನೂರ್ ಔಟಾಗುತ್ತಿದ್ದಂತೆ ಅಫ್ಘಾನ್ ಕುಸಿತ ಆರಂಭವಾಯಿತು.
ಅಬ್ದುಲ್ ಹದಿ ಅಜೇಯ 37 ರನ್ಗಳಿಸಿದರೂ ಅದು ನಿಧಾನಗತಿಯ ಇನ್ನಿಂಗ್ಸ್ ಆಗಿತ್ತು. ಬಿಲಾಲ್ ಅಹ್ಮದ್ 33 ಮತ್ತು ನೂರ್ ಅಹ್ಮದ್ 25 ರನ್ಗಳಿಸಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ. ಅಂತಿಮವಾಗಿ ಅಫ್ಘಾನಿಸ್ತಾನ 47 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 215 ರನ್ಗಳಿಸಿತು. ಡಕ್ ವರ್ತ್ ನಿಯಮದಂತೆ ಇಂಗ್ಲೆಂಡ್ 15 ರನ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.