19 ವಯೋಮಿತಿ ವಿಶ್ವಕಪ್ ಕ್ರಿಕೆಟ್ – ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ಪಾಕಿಸ್ತಾನ
19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಇಂಗ್ಲೆಂಡ್ ನಾಯಕ ಟಾಮ್ ಪ್ರೀಸ್ಟ್ ಅವರ ಅಜೇಯ 154 ರನ್ ಗಳ ಸಹಾಯದಿಂದ ಇಂಗ್ಲೆಂಡ್ ತಂಡ 189 ರನ್ ಗಳಿಂದ ಯುಎಇ ತಂಡವನ್ನು ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್ ಗೆ 362 ರನ್ ದಾಖಲಿಸಿತು.
ಗೆಲ್ಲಲು ಕಠಿಣ ಸವಾಲನ್ನು ಬೆನ್ನಟ್ಟಿದ್ದ ಯುಎಇ ತಂಡ 38.2 ಓವರ್ ಗಳಲ್ಲಿ 173 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಇಂಗ್ಲೆಂಡ್ ಪರ ರೆಹಾನ್ ಅಹಮ್ಮದ್ 30ಕ್ಕೆ 4 ವಿಕೆಟ್ ಉರುಳಿಸಿ ಗಮನ ಸೆಳೆದ್ರು. ಇಂಗ್ಲೆಂಡ್ ತಂಡದ ನಾಯಕ ಟಾಮ್ ಪ್ರಿಸ್ಟ್ ಅವರು 119 ಎಸೆತಗಳಲ್ಲಿ 13 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಾಕಿಸ್ತಾನಕ್ಕೆ ಶರಣಾದ ಅಫಘಾನಿಸ್ತಾನ
ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ 24 ರನ್ ಗಳಿಂದ ಅಫಘಾನಿಸ್ತಾನ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿತ್ತು.
ಸಿ ಗುಂಪಿನ ಈ ಪಂದ್ಯದಲ್ಲಿ ಪಾಕಿಸ್ತಾನ 239 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಅಫಘಾನಿಸ್ತಾನ ತಂಡ 215 ರನ್ ಗಳಿಸಲಷ್ಟೇ ಶಕ್ತವಾಯ್ತು.
ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾ ದೇಶ ತಂಡ ಎಂಟು ವಿಕೆಟ್ ಗಳಿಂದ ಕೆನಡಾ ತಂಡವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡ 136 ರನ್ ಗಳಿಸಿತು. ಇದಕ್ಕುತ್ತರವಾಗಿ ಬಾಂಗ್ಲಾದೇಶ ತಂಡ 30.1 ಓವರ್ ಗಳಲ್ಲಿ ಗೆಲುವು ದಾಖಲಿಸಿತು.