ಟರ್ಬನೇಟರ್ ಗೆ ಅಂಟಿಕೊಂಡ ಕೋವಿಡ್ -19
ಟೀಮ್ ಇಂಡಿಯಾದ ಮಾಜಿ ಆಟಗಾರ, ಟರ್ಬನೇಟರ್ ಹರ್ಭಜನ್ ಸಿಂಗ್ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ.
ಈ ವಿಚಾರವನ್ನು ಸ್ವತಃ ಹರ್ಭಜನ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ನನಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕೋವಿಡ್ ಸೋಂಕಿನ ಲಘು ರೋಗ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ನಾನು ಕ್ವಾರಂಟೈನ್ ನಲ್ಲಿದ್ದೇನೆ. ಅಗತ್ಯವಿರುವ ಎಲ್ಲಾ ಮುನ್ನೆಚ್ಚೆರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ದಯವಿಟ್ಟು ಸುರಕ್ಷಿತವಾಗಿರಿ.. ಕಾಳಜಿ ವಹಿಸಿ ಎಂದು ಹರ್ಭಜನ್ ಸಿಂಗ್ ಅವರು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಕೂಡ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ವೈರಸ್ ನಿಂದ ತಪ್ಪಿಸಿಕೊಂಡಿದ್ರೂ ಇದೀಗ ಅಂಟಿಕೊಂಡಿದೆ. ಜಾಗರುಕತೆಯಿಂದ ಇರಿ ಎಂದು ಹೇಳಿದ್ದಾರೆ.
ಹರ್ಭಜನ್ ಸಿಂಗ್ ಅವರು ಇತ್ತೀಚೆಗೆ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಸದ್ಯ ಹರ್ಭಜನ್ ಸಿಂಗ್ ಅವರು ದಿ ಟರ್ಬನೇಟರ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಸಕ್ರಿಯವಾಗಿದ್ದಾರೆ.
23 ವರ್ಷಗಳ ಸುಂದರ ಕ್ರಿಕೆಟ್ ಬದುಕಿನಲ್ಲಿ ಹರ್ಭಜನ್ ಸಿಂಗ್ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ವಿವಾದ, ಸಂಭ್ರಮ, ಗೆಲುವು, ಸೋಲು ಹೀಗೆ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದರು.
ಅಷ್ಟೇ ಅಲ್ಲ, ಚೊಚ್ಚಲ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಸದಸ್ಯನಾಗಿದ್ದರು.