ಯುವ ಆಟಗಾರ ಹರ್ನೂರ್ ಸಿಂಗ್ ಭರ್ಜರಿ ಶತಕ ಮತ್ತು ರಾಜವರ್ಧನ್ ಹಂಗರಗೇಕರ್ ಅವರ ಆಲ್ ರೌಂಡರ್ ಆಟದ ಪ್ರದರ್ಶನದ ಬಲದಿಂದ ಭಾರತ 19 ವರ್ಷದೊಳಗಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯುಎಇ ತಂಡವನ್ನು ಮಣಿಸಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 5 ಓವರ್ ಗಳಲ್ಲಿ 5 ವಿಕೆಟ್ ಗೆ 282 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಯುಎಇ 34.3 ಓವರ್ ಗಳಲ್ಲಿ 128 ರನ್ ಗಳಿಗೆ ಆಲೌಟ್ ಆಯಿತು. ಆಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ಎರಡು ಅಂಕಗಳೊಂದಿಗೆ “ಎ” ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ.
ಗುರಿಯನ್ನು ಹಿಂಬಾಲಿಸಿದ ಯುಎಇ ತಂಡದ ಪರ ಕೈ ಸ್ಮಿತ್ 45, ಸೂರ್ಯ ಸತೀಶ್ 21, ಧ್ರುವ ಪರಾಶರ್ 19, ಅಲಿಶನ್ ಶರಾಫು 13 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಭಾರತದ ಪರ ರಾಜವರ್ಧನ್ ಹಂಗರಗೇಕರ್ ಮೂರು ಮತ್ತು ಗರ್ವ್ ಸಾಂಗ್ವಾನ್, ವಿಕ್ಕಿ ಒಸ್ತ್ವಾಲ್, ಕೌಶಲ್ ತಾಂಬೆ ತಲಾ ಎರಡು ವಿಕೆಟ್ ಕಬಳಿಸಿದರು.
ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ ಗೆ ಆರಂಭಿಕ ಹರ್ನೂರ್ ಸಿಂಗ್ ಮತ್ತು ಶೇಕ್ ರಶೀದ್ (35) ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 90 ರನ್ ಗಳ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು.
ಮೂರನೇ ವಿಕೆಟ್ ಗೆ ಹರ್ನೂರ್ ಸಿಂಗ್ ಹಾಗೂ ನಾಯಕ ಯಶ್ ಧುಲ್ ಜೋಡಿ ಸೊಗಸಾದ ಆಟದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಯಿತು. ಈ ಜೋಡಿ 120 ರನ್ ಗಳ ಕಾಣಿಕೆ ನೀಡಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಹರ್ನೂರ್ ಸಿಂಗ್ 130 ಎಸೆತಗಳಲ್ಲಿ 11 ಬೌಂಡರಿ ಸೇರಿದಂತೆ 120 ರನ್ ಬಾರಿಸಿ ಔಟ್ ಆದರು.
ಯಶ್ ಧುಲ್ 4 ಬೌಂಡರಿ ಸಹಾಯದಿಂದ 63 ರನ್ ಸಿಡಿಸಿ ಔಟ್ ಆದರು. ರಾಜವರ್ಧನ್ ಹಂಗರಗೇಕರ್ ಅಜೇಯ 48 ರನ್ ಬಾರಿಸಿದರು.