ಭರ್ಜರಿ ಪ್ರದರ್ಶನ ನೀಡಿದ ರಾಕೇಶ್ ನರ್ವಾಲ್ ಹಾಗೂ ಗಿರೀಶ್ ಮಾರುತಿ ಅವರ ಸೊಗಸಾದ ಆಟದ ಬಲದಿಂದ ಗುಜರಾತ್ ಜೈಂಟ್ಸ್ ಪ್ರಸಕ್ತ ಋತುವಿನ ಪ್ರೋ ಕಬಡ್ಡಿ ಲೀಗ್ ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಢವನ್ನು ಮಣಿಸಿ ಪೂರ್ಣ ಅಂಕ ಕಲೆ ಹಾಕಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ 34-27 ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ಅಬ್ಬರಿಸಿತು.
ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿದ ತಂಡಗಳು ಅಂಕಗಳನ್ನು ಸುಲಭವಾಗಿ ನೀಡಲಿಲ್ಲ. ಪರಿಣಾಮ ಅಂಕಗಳನ್ನು ಕಲೆ ಹಾಕಲು ಆಟಗಾರರು ಶ್ರಮಿಸಬೇಕಾಯಿತು. ಈ ಅವಧಿಯಲ್ಲಿ ಗುಜರಾತ್ ಅಂಕ ಗಳಿಕೆಯಲ್ಲಿ ಕೊಂಚ ಮುನ್ನಡೆ ಸಾಧಿಸಿತು. ಗುಜರಾತ್ 19 ಅಂಕ ಕಲೆ ಹಾಕಿದರೆ, ಜೈಪುರ್ 17 ಅಂಕ ಸೇರಿಸಿತು. ಗುಜರಾತ್ ರಕ್ಷಣಾ ವಿಭಾಗದ ಮೂಲಕ ಅಂಕಗಳನ್ನು ಕಲೆ ಹಾಕಿದರೆ, ಪಿಂಕ್ ಪ್ಯಾಂಥರ್ಸ್ ದಾಳಿಯ ಮೂಲಕ ಅಂಕಗಳನ್ನು ಸೇರಿಸಿತು. ಈ ಅವಧಿಯಲ್ಲಿ ಉಭಯ ತಂಡಗಳೂ ತಲಾ ಒಂದೊಂದು ಬಾರಿ ಆಲೌಟ್ ಆದವು.
ಎರಡನೇ ಅವಧಿಯ ಆಟದಲ್ಲೂ ಉಭಯ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಪರಿಣಾಮ ಉಭಯ ತಂಡಗಳು ಅಂಕಗಳಿಕೆಯಲ್ಲಿ ಆರಂಭದಲ್ಲಿ ಸಮಬಲ ಸಾಧಿಸಿದವು. ಆದರೆ ಕೊನೆಯಲ್ಲಿ ಗುಜರಾತ್ ಸ್ಥಿರ ಪ್ರದರ್ಶನ ನೀಡಿದ್ದರಿಂದ ಜಯ ಸಾಧಿಸಿತು. ಈ ಅವಧಿಯಲ್ಲಿ ಗುಜರಾತ್ ದಾಳಿಯಲ್ಲಿ 15 ಅಂಕ ಕಲೆ ಹಾಕಿದರೆ, ಎದುರಾಳಿ ಆಟಗಾರರನ್ನು ಹಿಡಿದು ಜೈಂಟ್ಸ್ ತಂಡ 6 ಅಂಕ ಸೇರಿಸಿತು.
ರಾಕೇಶ್ ನರ್ವಾಲ್ 15 ಬಾರಿ ದಾಳಿ ನಡೆಸಿ, ಏಳು ಅಂಕ ಕಲೆ ಹಾಕಿದರು. ಉಳಿದಂತೆ ಪರ್ವೇಶ್, ಪ್ರದೀಪ್ ಸಹ ಗೆಲುವಿನಲ್ಲಿ ತಮ್ಮ ಕಾಣಿಕೆ ನೀಡಿದರು. ಗಿರೀಶ್ ಮಾರುತಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದರು. ಗುಜರಾತ್ ನ ಈ ಸ್ಟಾರ್ ಆಟಗಾರ ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದರು. ಇವರು 10 ಬಾರಿ ಎದುರಾಳಿಯನ್ನು ಹಿಡಿಯುವ ಪ್ರಯತ್ನದಲ್ಲಿ ಏಳು ಬಾರಿ ಯಶ ಕಂಡರು.
ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 17 ಬಾರಿ ದಾಳಿ ನಡೆಸಿ 10 ಅಂಕ ಸೇರಿಸಿದರು. ನಾಯಕ ದೀಪಕ್ ಹೂಡಾ 4, ರಕ್ಷಣಾ ಆಟಗಾರ ಸಂದೀಪ್ ಮೂರು ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.