ಸೋಲು… ಸೋಲು… ಸೋಲು… ಸೋಲು…
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು, ಒಂದರ ಹಿಂದೆ ಒಂದರಂತೆ ಸತತ ನಾಲ್ಕು ಸೋಲುಗಳೊಂದಿಗೆ ಭಾರೀ ಆಘಾತ ಅನುಭವಿಸಿವೆ.
ಐಪಿಎಲ್ನಲ್ಲಿ ಈಗಾಗಲೇ ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಈ ಎರಡು ತಂಡಗಳು, ಸೋಲಿನಲ್ಲೂ ಸಹ ಒಂದೇ ದೋಣಿಯಲ್ಲಿ ಸಾಗುತ್ತಿವೆ. ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ಈ ಎರಡು ತಂಡಗಳು ಐಪಿಎಲ್ನಲ್ಲಿ ಬಲಾಢ್ಯ ತಂಡಗಳೆನಿಸಿದ್ದರೂ, ಈ ಸೀಸನ್ನಲ್ಲಿ ದೊಡ್ಡಮಟ್ಟದ ಹಿನ್ನಡೆ ಅನುಭವಿಸಿವೆ. ಉಭಯ ತಂಡಗಳು ಆಡಿರುವ ನಾಲ್ಕು ಪಂದ್ಯಗಳನ್ನು ಸೋತು ಸೋಲಿನ ಸುಳಿಯಲ್ಲಿ ಸಿಲುಕಿವೆ.
ಮುಂಬೈಗೆ ಹೊಸತೇನಲ್ಲ:
ಐಪಿಎಲ್ನಲ್ಲಿ ಐದು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್, ಬಲಿಷ್ಠ ತಂಡ ಎಂಬುದರಲ್ಲಿ ಸಂದೇಹವಿಲ್ಲ. ಚುಟುಕು ಕ್ರಿಕೆಟ್ನಲ್ಲಿ ದೊಡ್ಡ ಸಕ್ಸಸ್ ಕಂಡಿರುವ ಮುಂಬೈಗೆ ಇಂತಹ ಸೋಲಿನ ಆಘಾತ ಹೊಸದೇನಲ್ಲ. ಐಪಿಎಲ್ನ ಬಹುತೇಕ ಟೂರ್ನಿಯಲ್ಲಿ ಸೋಲಿನ ಆರಂಭ ಕಂಡರೂ, ನಂತರದಲ್ಲಿ ಪ್ರಶಸ್ತಿ ಗೆದ್ದು ಚಾಂಪಿಯನ್ಪಟ್ಟಕ್ಕೇರುವ ಅಭ್ಯಾಸ ಹೊಸದೇನಲ್ಲ. ಐಪಿಎಲ್ನಲ್ಲಿ ಹೆಚ್ಚು ಬಾರಿ ಆರಂಭಿಕ ಸತತ ನಾಲ್ಕು ಪಂದ್ಯಗಳನ್ನು ಸೋತಿರುವ ದಾಖಲೆ ಮುಂಬೈ ಇಂಡಿಯನ್ಸ್ ತಂಡಕ್ಕಿದೆ.
ಈ ಹಿಂದೆ 2008ರಲ್ಲಿ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ 3 ಹಾಗೂ ಶಾನ್ ಪೊಲಾಕ್ ಮುಂದಾಳತ್ವದಲ್ಲಿ 1 ಪಂದ್ಯವನ್ನು ಸೋತಿತ್ತು. ಆ ನಂತರದಲ್ಲಿ 2014 ಮತ್ತು 2015ರಲ್ಲೂ ಇದೇ ರೀತಿಯ ಆಘಾತಕಾರಿ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್, 2015ರಲ್ಲಿ ಪ್ರಶಸ್ತಿ ಗೆದ್ದುಬೀಗಿತ್ತು. ಇದೀಗ ಮತ್ತೊಮ್ಮೆ ಸತತ ನಾಲ್ಕು ಸೋಲು ಕಂಡಿರುವ ರೋಹಿತ್ ಪಡೆ, ಮೊದಲ ಗೆಲುವಿನ ಹುಡುಕಾಟದಲ್ಲಿದೆ.
ಚೆನ್ನೈಗೆ ಹೊಸ ಅನುಭವ:
ಐಪಿಎಲ್ನಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2ನೇ ಸ್ಥಾನದಲ್ಲಿದೆ. ಈವರೆಗೂ ನಾಲ್ಕು ಬಾರಿ ಚಾಂಪಿಯನ್ ಎನಿಸಿರುವ ಹಾಗೂ ಹೆಚ್ಚು ಬಾರಿ ಪ್ಲೇ-ಆಫ್ ಹಂತಕ್ಕೇರಿದ್ದ ಸಿಎಸ್ಕೆ, ಗೆಲುವಿನ ಹುಡುಕಾಟದಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈವರೆಗೂ ಸತತವಾಗಿ ನಾಲ್ಕು ಪಂದ್ಯವನ್ನ ಸೋತಿರಲಿಲ್ಲ. ಹೀಗಾಗಿ ಹೊಸ ನಾಯಕನೊಂದಿಗೆ ಮುನ್ನಡೆಯುತ್ತಿರುವ ಸಿಎಸ್ಕೆ, ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲು ತಮ್ಮದೇ ರಣತಂತ್ರ ರೂಪಿಸುತ್ತಿದೆ.
ಸತತವಾಗಿ ಆರಂಭಿಕ ನಾಲ್ಕು ಪಂದ್ಯ ಸೋತ ತಂಡಗಳು:
ಮುಂಬೈ ಇಂಡಿಯನ್ಸ್ – 2008
ಡೆಕ್ಕನ್ ಚಾರ್ಜರ್ಸ್ – 2012
ಡೆಲ್ಲಿ ಕ್ಯಾಪಿಟಲ್ಸ್ – 2013
ಮುಂಬೈ ಇಂಡಿಯನ್ಸ್ – 2014
ಮುಂಬೈ ಇಂಡಿಯನ್ಸ್ – 2015
ರಾಯಲ್ ಜಾಲೆಂಜರ್ಸ್ – 2019
ಚೆನ್ನೈ ಸೂಪರ್ ಕಿಂಗ್ಸ್ – 2022
ಮುಂಬೈ ಇಂಡಿಯನ್ಸ್ – 2022