ಭರವಸೆಯ ಆಟಗಾರ ರಜತ್ ಪಟೇದಾರ್ ಸಿಡಿಸಿದ ಶತಕದ ಬಲದಿಂದ ಮಧ್ಯಪ್ರದೇಶ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ನಾಲ್ಕನೇ ದಿನದಾಟದಲ್ಲಿ 3 ವಿಕೆಟ್ ಗೆ 368 ರನ್ ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರೆಸಿದ ಮಧ್ಯಪ್ರದೇಶ 536 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್ ನಲ್ಲಿ 162 ರನ್ ಗಳ ಭಾರೀ ಮುನ್ನಡೆ ಸಾಧಿಸಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ಗೆ 113 ರನ್ ಗಳನ್ನು ಕಲೆ ಹಾಕಿದ್ದು, 49 ರನ್ ಗಳ ಹಿನ್ನಡೆ ಅನುಭವಿಸುತ್ತಿದೆ. ಈ ಪಂದ್ಯದಲ್ಲಿ ಮುಂಬೈ ಗೆಲುವನ್ನು ಸಾಧಿಸಲು ಪವಾಡ ನಡೆಯಬೇಕಿದೆ.

ಶನಿವಾರ 67 ರನ್ ಗಳಿಂದ ಆಟ ಮುಂದುವರೆಸಿದ ಭರವಸೆಯ ಸ್ಟಾರ್ ಆಟಗಾರ ರಜತ್ ಪಟೇದಾರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಸಮಯೋಚಿತ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. 219 ಎಸೆತಗಳಲ್ಲಿ ಇವರು 20 ಬೌಂಡರಿ ಸೇರಿದಂತೆ 122 ರನ್ ಸಿಡಿಸಿದರು.
ಇವರನ್ನು ಬಿಟ್ಟರೆ ನಾಲ್ಕನೇ ದಿನದಾಟದಲ್ಲಿ ಸಾರಾನ್ಶ್ ಜೈನ್ ಮಿಂಚಿದರು. ಇವರು 7 ಬೌಂಡರಿ ನೆರವಿನಿಂದ 57 ರನ್ ಬಾರಿಸಿದರು.
ಮುಂಬೈ ತಂಡದ ಪರ ಶಾಮ್ಸ್ ಮುಲಾನಿ 5, ತುಷಾರ್ ದೇಶಪಾಂಡೆ 3, ಮೋಹಿತ್ 2 ವಿಕೆಟ್ ಕಬಳಿಸಿದರು.

ಹಿನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ಆರಂಭಿಕ ಪೃಥ್ವಿ ಶಾ ಹಾಗೂ ಹಾರ್ದಿಕ್ ತೋಮರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು 10.3 ಓವರ್ ಗಳಲ್ಲಿ 63 ರನ್ ಸೇರಿಸಿದರು. ಹಾರ್ದಿಕ್ 25 ಹಾಗೂ ಪೃಥ್ವಿ 44 ರನ್ ಗಳಿಗೆ ಆಟ ಮುಗಿಸಿದರು.
ಅರ್ಮಾನ್ ಜಾಫರ್ ಹಾಗೂ ಸುವೇದ್ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.