ಇಂದು ಐಪಿಎಲ್ 15ನೇ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಕೀರನ್ ಪೊಲಾರ್ಡ್ ಅವರ ಜನ್ಮದಿನ. ಅವರಿಗೆ ಗುರುವಾರ 35 ವರ್ಷ ತುಂಬಿದೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಪೊಲಾರ್ಡ್ ವೆಸ್ಟ್ ಇಂಡೀಸ್ ತಂಡದ ಏಕದಿನ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪೊಲಾರ್ಡ್ ಅವರ ಜನ್ಮದಿನವು ಯಾವಾಗಲೂ ಮುಂಬೈ ಇಂಡಿಯನ್ಸ್‌ಗೆ ಅದೃಷ್ಟಕರವಾಗಿದೆ. ಮುಂಬೈ ಈ ದಿನ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.
ಪೊಲಾರ್ಡ್ 2010 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಅಂದಿನಿಂದ ಅವರು ಈ ತಂಡದ ಭಾಗವಾಗಿದ್ದಾರೆ. ಪೊಲಾರ್ಡ್ ಅವರ ಜನ್ಮದಿನದಂದು ಅಂದರೆ ಮೇ 12 ರಂದು ಮುಂಬೈ ಇಂಡಿಯನ್ಸ್ ಇದುವರೆಗೆ ಮೂರು ಪಂದ್ಯಗಳನ್ನು ಆಡಿದೆ ಮತ್ತು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ.

2012ರಲ್ಲಿ ಪೊಲಾರ್ಡ್ ಜನ್ಮದಿನದಂದು ಮುಂಬೈ ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯ ಆಡಿತ್ತು. ಈ ಪಂದ್ಯದಲ್ಲಿ ಮುಂಬೈ ತಂಡ ಕೆಕೆಆರ್ ತಂಡವನ್ನು 27 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಪೊಲಾರ್ಡ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಮತ್ತೊಂದೆಡೆ, ಪೊಲಾರ್ಡ್ ಜನ್ಮದಿನದಂದು ಮುಂಬೈ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಮುಂಬೈ 7 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. ಪೊಲಾರ್ಡ್ 7 ಎಸೆತಗಳಲ್ಲಿ 6 ರನ್ ಗಳಿಸಿದರು.

ಇದೇ ಸಮಯದಲ್ಲಿ ಪೊಲಾರ್ಡ್ ಅವರ ಜನ್ಮದಿನದಂದು ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಮುಂಬೈ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಉಭಯ ತಂಡಗಳ ನಡುವೆ ನಡೆದ ಈ ರೋಚಕ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮುಂಬೈ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜಯ ಸಾಧಿಸಿತು. ಅಂತಿಮ ಪಂದ್ಯದಲ್ಲಿ, ಲಸಿತ್ ಮಾಲಿಂಗ ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡಿ ಮುಂಬೈಗೆ ಚಾಂಪಿಯನ್ ಆಗಲು ಕಾರಣರಾದರು.

ಈ ಋತುವಿನಲ್ಲಿ ಪೊಲಾರ್ಡ್ ಉತ್ತಮ ಪ್ರದರ್ಶನ ನೀಡಲಿಲ್ಲ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಕೇವಲ 144 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಐಪಿಎಲ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.