ಐಪಿಎಲ್ ನ ಶ್ರೇಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಕಾದಾಟದಲ್ಲಿ ರೋಹಿತ್ ಪಡೆಯ ಕೈ ಮೇಲಾಗಿದೆ. ಐದು ಬಾರಿ ಚಾಂಪಿಯನ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ. ಈ ಮೂಲಕ ಮುಂದಿನ ಹಂತ ತಲುಪುವ ಚೆನ್ನೈ ಆಸೆ ಕಮರಿದೆ.
ಪಿಚ್ ಮರ್ಮ ಅರಿತ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡರು. ಈ ಬಾರಿ ನಾಯಕನ ನಿರ್ಧಾರವನ್ನು ವೇಗಿಗಳು ಸಮರ್ಥಿಸಿಕೊಂಡರು. ಚೆನ್ನೈ ತಂಡದ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರ ಋತುರಾಜ್ ಗಾಯಕ್ವಾಡ್ (7) ಹಾಗೂ ಡೇವೊನ್ ಕಾನ್ವೆ (0), ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ (0), ಕರ್ನಾಟಕದ ರಾಬಿನ್ ಉತ್ತಪ್ಪ (1) ಬಂದು ಹೋಗುವ ಸಂಪ್ರದಾಯ ಮುಗಿಸಿದರು.

ಮೊದಲ ಆರು ಓವರ್ ಗಳಲ್ಲಿ ಬೌಲರ್ ಗಳ ದರ್ಬಾರ್ ನಡೆಸಿದ್ದರಿಂದ ಚೆನ್ನೈ ಬ್ಯಾಟರ್ ನಿರಾಸೆ ಅನುಭವಿಸಿದರು. ಮೊದಲ ಆರು ಓವರ್ ಗಳಲ್ಲಿ ಸಿಎಸ್ ಕೆ ಐದು ವಿಕೆಟ್ ಕಳೆದುಕೊಂಡಿತು.
39 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಧೋನಿ ಹಾಗೂ ಆಲ್ ರೌಂಡರ್ ಡ್ವೇನ್ ಬ್ರಾವೊ ಜೋಡಿ 29 ಎಸೆತಗಳಲ್ಲಿ 39 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿತು.

ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ತಂಡ ಅಲ್ಪ ಮೊತ್ತ ಕಲೆ ಹಾಕಿತು.
ನಾಯಕ ಮಹೇಂದ್ರ ಸಿಂಗ್ ಧೋನಿ ಏಕಾಂಗಿ ಹೋರಾಟ ನಡೆಸಿದರು. ಇವರು 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 36 ರನ್ ಬಾರಿಸಿದರು. ಚೆನ್ನೈ 16 ಓವರ್ ಗಳಲ್ಲಿ 97 ರನ್ ಗಳಿಗೆ ಆಲೌಟ್ ಆಯಿತು.
ಐಪಿಎಲ್ ಇತಿಹಾಸದಲ್ಲಿ ಸಿಎಸ್ ಕೆ ಗಳಿಸಿದ ಎರಡನೇ ಅತಿ ಕಡಿಮೆ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2013ರಲ್ಲಿ ಮುಂಬೈ ವಿರುದ್ಧ ತಂಡ ಕೇವಲ 79 ರನ್ಗಳಿಗೆ ಆಲೌಟ್ ಆಗಿತ್ತು.

ಅಲ್ಪ ಮೊತ್ತ ಹಿಂಬಾಲಿಸಿದ ಮುಂಬೈ ತಂಡದ ಆರಂಭಿಕ ಇಶಾನ್ ಕಿಶನ್, ಮೂರನೇ ಕ್ರಮಾಂಕದಲ್ಲಿ ಡೇನಿಯಲ್ ಸ್ಯಾಮ್ಸ್ ನಿರಾಸೆ ಅನುಭವಿಸಿದರು. ರೋಹಿತ್ ಶರ್ಮಾ 18 ರನ್ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರ ಆಟಕ್ಕೆ ಸಿಮರ್ಜಿತ್ ಬ್ರೇಕ್ ಹಾಕಿದರು.
ಐದನೇ ವಿಕೆಟ್ ಗೆ ತಿಲಕ್ ವರ್ಮಾ ಹಾಗೂ ಹೃತಿಕ್ ಶೋಕಿನ್ (18) ಜೋಡಿ 47 ಎಸೆತಗಳಲ್ಲಿ 48 ರನ್ ಸೇರಿಸಿತು.
ಗೆಲುವಿಗೆ ಅಗತ್ಯ ರನ್ ಗಳನ್ನು ಟೀಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಕಲೆ ಹಾಕಿತು. ತಿಲಕ್ ಅಜೇಯ 34 ರನ್ ಬಾರಿಸಿದರೆ, ಟೀಮ್ ಡೇವಿಡ್ ಅಜೇಯ 16 ರನ್ ಸಿಡಿಸಿದರು.