ಸತತ ಮೂರನೇ ಟೆಸ್ಟ್ ಪಂದ್ಯದಲ್ಲಿ 275+ ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಇತಿಹಾಸ ನಿರ್ಮಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 296 ರನ್ ಗಳ ಗುರಿಯನ್ನು ಕೇವಲ ಮೂರು ವಿಕೆಟ್ ಕಳೆದುಕೊಂಡು ಮುಟ್ಟಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಆತಿಥೇಯರು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಇಂಗ್ಲೆಂಡ್ ನ ಈ ಗೆಲುವು ಟೀಂ ಇಂಡಿಯಾಗೆ ಎಚ್ಚರಿಕೆ ಗಂಟೆಯಂತಿದೆ. ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯವು ಕರೋನಾದಿಂದಾಗಿ ಕಳೆದ ವರ್ಷ ಮುಂದೂಡಲ್ಪಟ್ಟ ಸರಣಿಯ ಭಾಗವಾಗಿದೆ. ಸರಣಿಯಲ್ಲಿ ಭಾರತ 2-1 ರಿಂದ ಮುಂದಿದೆ.
ಮಾಜಿ ನಾಯಕ ಜೋ ರೂಟ್ ಮತ್ತೊಮ್ಮೆ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು 86 ರನ್ ಗಳಿಸಿ ಅಜೇಯರಾಗಿ ಉಳಿದರು. ರೂಟ್ ಹೊರತಾಗಿ, ಜಾನಿ ಬೈರ್‌ಸ್ಟೋವ್ (71) ಮತ್ತು ಆಲಿ ಪೋಪ್ (82) ಕೂಡ ಅರ್ಧಶತಕ ಗಳಿಸಿದರು. ರೂಟ್ ಅವರ ಇನ್ನಿಂಗ್ಸ್‌ನಲ್ಲಿ 125 ಎಸೆತಗಳನ್ನು ಎದುರಿಸಿದರೆ, ಬೈರ್‌ಸ್ಟೋವ್ ಕೇವಲ 44 ಎಸೆತಗಳಲ್ಲಿ 71 ರನ್ ಗಳಿಸಿದರು.
ಮೂರನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 329 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 360 ರನ್ ಗಳಿಸಿ 31 ರನ್ ಮುನ್ನಡೆ ಸಾಧಿಸಿತು. ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 326 ರನ್ ಗಳಿಸಿ ಇಂಗ್ಲೆಂಡ್ ಮುಂದೆ 296 ರನ್‌ಗಳ ಗುರಿಯನ್ನು ನೀಡಿದೆ.

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಏಳನೇ ಬಾರಿ ಕ್ಲೀನ್ ಸ್ವೀಪ್
ಎರಡು ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಕ್ಲೀನ್ ಸ್ವೀಪ್ ಮಾಡಿದ್ದು ಏಳನೇ ಬಾರಿ. ಇದಕ್ಕೂ ಮುನ್ನ 1955, 1963, 1965, 1978, 1983 ಮತ್ತು 2004ರಲ್ಲಿ ಆಡಿದ ಸರಣಿಯಲ್ಲಿ ಕಿವೀಸ್ ತಂಡವನ್ನು ಮಣಿಸಿತ್ತು.
ಈ ಸರಣಿಗೂ ಮುನ್ನ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ಕೋಚ್ ಇಬ್ಬರನ್ನೂ ಬದಲಾಯಿಸಿತ್ತು. ಜೋ ರೂಟ್ ಬದಲಿಗೆ ಬೆನ್ ಸ್ಟೋಕ್ಸ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಇದೇ ಸಮಯದಲ್ಲಿ, ಕ್ರಿಸ್ ಸಿಲ್ವರ್‌ವುಡ್ ಬದಲಿಗೆ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಅವರನ್ನು ತರಬೇತುದಾರರನ್ನಾಗಿ ಮಾಡಲಾಯಿತು. ಈ ಬದಲಾವಣೆಗಳ ನಂತರ ಇಂಗ್ಲೆಂಡ್ ತಂಡ ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿದೆ.