ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡಾ ಒಬ್ಬರು. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಕದಿನ, ಟಿ-20 ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಸಾಧನೆ ಮಾಡಿದೆ. ಫಿಲ್ಡ್ ನಲ್ಲಿ ಇದ್ದಾಗ ಇವರ ವಾರ್ಷಿಕ ಆದಾಯ ಎಷ್ಟಿತ್ತೋ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮೇಲೂ ಆದಾಯ ಇಳಿಕೆ ಆಗಿಲ್ಲ.
ಕಳೆದ ಒಂದು ವರ್ಷದಲ್ಲಿ ಧೋನಿ ಅವರ ಆದಾಯವು ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ. ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಜಮಾ ಮಾಡಿರುವ ಮುಂಗಡ ತೆರಿಗೆಯೇ ಇದಕ್ಕೆ ಸಾಕ್ಷಿ. ಅವರು 2021-22ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಮುಂಗಡ ತೆರಿಗೆಯಾಗಿ 38 ಕೋಟಿ ರೂ.ಗಳನ್ನು ಪಾವತಿಸಿದ್ದರೆ, ಕಳೆದ ವರ್ಷ ಅಂದರೆ 2020-21ನೇ ಸಾಲಿನಲ್ಲಿ ಈ ಮೊತ್ತ ಸುಮಾರು 30 ಕೋಟಿಗಳಷ್ಟಿತ್ತು. ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಈ ವರ್ಷವೂ ಜಾರ್ಖಂಡ್ನ ಅತಿದೊಡ್ಡ ವೈಯಕ್ತಿಕ ತೆರಿಗೆ ಪಾವತಿದಾರರಾಗಿದ್ದಾರೆ.
ತಜ್ಞರ ಪ್ರಕಾರ, ಧೋನಿ ಅವರು ಠೇವಣಿ ಮಾಡಿದ 38 ಕೋಟಿ ಮುಂಗಡ ತೆರಿಗೆಯ ಆಧಾರದ ಮೇಲೆ, ಅವರ ಆದಾಯವು 2021-22ರಲ್ಲಿ ಸುಮಾರು 130 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಧೋನಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ನಿರಂತರವಾಗಿ ಜಾರ್ಖಂಡ್ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅತಿದೊಡ್ಡ ಆದಾಯ ತೆರಿಗೆ ಪಾವತಿದಾರ.
2019-20ರಲ್ಲಿ ಅವರು 28 ಕೋಟಿ ಪಾವತಿಸಿದ್ದರು ಮತ್ತು ಅದಕ್ಕೂ ಮೊದಲು 2018-19ರಲ್ಲಿಯೂ ಅಷ್ಟೇ ಮೊತ್ತವನ್ನು ಆದಾಯ ತೆರಿಗೆಯಾಗಿ ಪಾವತಿಸಿದ್ದಾರೆ. ಇದಕ್ಕೂ ಮುನ್ನ 2017-18ರಲ್ಲಿ 12.17 ಕೋಟಿ ಹಾಗೂ 2016-17ರಲ್ಲಿ 10.93 ಕೋಟಿ ಆದಾಯ ತೆರಿಗೆ ಪಾವತಿಸಿದ್ದರು.
ನಿಸ್ಸಂಶಯವಾಗಿ, 15 ಆಗಸ್ಟ್ 2020 ರಂದು, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ಆಟಗಾರನಾಗಿ ದೂರವಿದ್ದರೂ ವ್ಯಾಪಾರದ ಅಖಾಡದಲ್ಲಿ ಇನ್ನು ಅವರು ಮಾಸ್ಟರ್. ಕ್ರಿಕೆಟಿಗನಾಗಿ, ಐಪಿಎಲ್ನೊಂದಿಗಿನ ಅವರ ಸಂಬಂಧವು ಹಾಗೇ ಉಳಿದಿದೆ.
ಭಾರತದ ಮಾಜಿ ನಾಯಕ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿ ಹೋಮ್ಲೇನ್, ಉಪಯೋಗಿಸಿದ ಕಾರು ಮಾರಾಟ ಕಂಪನಿ ಕಾರ್ಸ್ 24, ಸ್ಟಾರ್ಟ್ಅಪ್ ಕಂಪನಿ ಖಾತಾಬುಕ್, ಸ್ಪೋರ್ಟ್ಸ್ ಕಂಪನಿ ರನ್ ಆಡಮ್, ಕ್ರಿಕೆಟ್ ಕೋಚಿಂಗ್ ಮತ್ತು ಸಾವಯವ ಕೃಷಿಯಲ್ಲಿ ಹೂಡಿಕೆ ಮಾಡಿದ್ದಾರೆ. ರಾಂಚಿಯಲ್ಲಿ ಅವರು ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಾರೆ.