ಓವರ್ ನಂಬರ್ 47.4.. ದಿನೇಶ್ ಬಾನಾ ಜೇಮ್ಸ್ ಸೇಲ್ಸ್ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಕೂಡಲೇ ಟೀಮ್ ಇಂಡಿಯಾದ ಯುವ ಆಟಗಾರರು ಸಂಭ್ರಮಿಸಿ ಕುಣಿದಾಡಿದರು. 5ನೇ ಬಾರಿಗೆ ಕಿರಿಯರ ವಿಶ್ವಕಪ್ನಲ್ಲಿ ಭಾರತ ಗೆದ್ದು ಬೀಗಿತು. ಇಂಗ್ಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿದ ಭಾರತ ವೆಸ್ಟ್ಇಂಡೀಸ್ನಲ್ಲಿ ಅಜೇಯ ತಂಡವಾಗಿ ವಿಶ್ವಕಪ್ ಎತ್ತಿತ್ತು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ರವಿ ಕುಮಾರ್ ಜೇಕಬ್ ಬೊಥಲ್ ರನ್ನು 2 ರನ್ಗಳಿಸಿದ್ದಾಗ ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ನಾಯಕ ಟಾಮ್ ಪ್ರೆಸ್ಟ್ ಖಾತೆಯನ್ನೇ ತೆರೆಯದಂತೆ ಮಾಡಿದರು. ಇನ್ನೊಂದೆಡೆ ಜಾರ್ಜ್ ಥಾಮಸ್ ಮತ್ತು ಜೇಕಬ್ ರೀವ್ ಕೌಂಟರ್ ಅಟ್ಯಾಕ್ಗೆ ಇಳಿದಿದರು.
ಟೀಮ್ ಇಂಡಿಯಾ ರಾಜ್ಭಾವಾ ರನ್ನು ಬೌಲಿಂಗ್ಗೆ ಇಳಿಸಿತು. ಭಾವಾ ಮೊದಲಿಗೆ 30 ಎಸೆತಗಳಲ್ಲಿ 4 ಫೋರ್ ಮತ್ತು 1 ಸಿಕ್ಸರ್ ನೆರವಿನಿಂದ 27 ರನ್ಗಳಿಸಿದ್ದ ಥಾಮಸ್ ವಿಕೆಟ್ ಹಾರಿಸಿದರು. ವಿಲಿಯಂ ಲಕ್ಸಟನ್ 4 ರನ್ಗಳಿಗೆ ಔಟಾದರೆ, ಜಾರ್ಜ್ ಬೆಲ್ ಖಾತೆ ತೆರೆಯಲು ಭಾವಾ ಅವಕಾಶ ನೀಡಲಿಲ್ಲ. ರೆಹನ್ ಅಹಮದ್ ಕೂಡ 10 ರನ್ಗಳಿಗೆ ಔಟಾದರು. ಕೌಶಲ್ ಥಾಂಬೆ ಅಲೆಕ್ಸ್ ಹಾರ್ಟನ್ ಆಟವನ್ನು 10ರನ್ಗಳಿಗೆ ಅಂತ್ಯಗೊಳಿಸಿದರು.
91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ಗೆ ರೀವ್ ಮತ್ತು ಸೇಲ್ಸ್ ಆಸರೆಯಾದರು. ರೀವ್ ವೇಗದ ಆಟ ಆಡಿದರು. ಈ ಜೋಡಿ 8ನೇ ವಿಕೆಟ್ಗೆ 93 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ದಾಳಿಗಿಳಿದ ರವಿಕುಮಾರ್ 95 ರನ್ಗಳಿಸಿದ್ದ ರೀವ್ ವಿಕೆಟ್ ಹಾರಿಸಿದರು. ಇದರ ಬೆನ್ನಲ್ಲೇ ಥಾಮಸ್ ಆಸ್ಪಿನ್ ವಾಲ್ ಕೂಡ ಔಟಾದರು. ಭಾವಾ ಜೋಶುವಾ ಬಾಯ್ಡನ್ ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡವನ್ನು 44.5 ಓವರುಗಳಲ್ಲೇ ಆಲೌಟ್ ಮಾಡಿದರು. ಕೇವಲ 189 ರನ್ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು. ರಾಜ್ ಭಾವಾ 5, ರವಿಕುಮಾರ್ 4 ವಿಕೆಟ್ ಪಡೆದು ಮಿಂಚಿದರು.
ಚೇಸಿಂಗ್ಗೆ ಹೊರಟ ಭಾರತಕ್ಕೆ ಮೊದಲ ಓವರ್ನಲ್ಲೇ ಶಾಕ್. ಜೊಶುವಾ ಅಂಗ್ಕ್ರಿಷ್ ರಘುವಂಶಿ ವಿಕೆಟ್ ಹಾರಿಸಿದರು. ಹರ್ನೂರ್ ಸಿಂಗ್ ಮತ್ತು ಶೇಕ್ ರಶೀದ್ ತಾಳ್ಮೆಯ ಆಟ ಆಡಿದರು. 2ನೇ ವಿಕೆಟ್ಗೆ ಈ ಜೋಡಿ 49 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ಅಸ್ಪಿನ್ ವಾಲ್ 21 ರನ್ಗಳಿಸಿದ್ದ ಹರ್ನೂರ್ ವಿಕೆಟ್ ಪಡೆದರು.
ಯಶ್ ಧುಲ್ ಮತ್ತು ಶೇಕ್ ರಶೀದ್ ಉತ್ತಮ ಜೊತೆಯಾಟ ಆಡಿದರು. ರಶೀದ್ 50 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಯಶ್ ಧುಲ್ ಕೂಡ 17 ರನ್ಗಳಿಸಿ ಸೇಲ್ಸ್ ಗೆ ವಿಕೆಟ್ ಒಪ್ಪಿಸಿದರು. ನಿಶಾಂತ್ ಸಿಂಧು ಮತ್ತು ರಾಜ್ ಭಾವಾ ಕೌಂಟರ್ ಅಟ್ಯಾಕ್ ಮಾಡಿದರು.ಈ ಜೋಡಿ 73 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ಭಾವಾ 35 ರನ್ಗಳಿಸಿ ಔಟಾದರು. ಕೌಶಲ್ ಥಾಂಬೆ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಈ ಮಧ್ಯೆ ನಿಶಾಂತ್ ಸಿಂಧು ಅಜೇಯ ಅರ್ಧಶತಕ ಬಾರಿಸಿದರು. ಕ್ರೀಸ್ಗಿಳಿದ ದಿನೇಶ್ ಬಾನಾ ಸತತ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸುತ್ತಿದ್ದಂತೆ ಟೀಮ್ ಇಂಡಿಯಾ ಚಾಂಪಿಯನ್ ತಂಡವಾಗಿ ಸಂಭ್ರಮಿಸಿತು. 5 ಬಾರಿಗೆ ವಿಶ್ವಕಪ್ ಎತ್ತಿ ಕುಣಿದಾಡಿತು