ದೆಹಲಿ ಮತ್ತು ಕಟಕ್ ಟಿ20 ಪಂದ್ಯಗಳನ್ನು ಟೀಮ್ ಇಂಡಿಯಾ ಸೋತಾಗ ಹೀನಾಯ ಸರಣಿ ಸೋಲು ಎಂದು ವಿಶ್ಲೇಷಣೆ ನಡೆದಿತ್ತು. ಆದರೆ ಟೀಮ್ ಇಂಡಿಯಾ ಅಷ್ಟು ಸುಲಭವಾಗಿ ಯಾವುದನನೂ ಬಿಟ್ಟುಕೊಡುವುದಿಲ್ಲ. ವಿಶಾಖಪಟ್ಟಣಂನಲ್ಲಿ ತಿರುಗಿಬಿದ್ದ ಟೀಮ್ ಇಂಡಿಯಾ ಪಂದ್ಯ ಗೆದ್ದು ಸಂಭ್ರಮಿಸಿತ್ತು. ಆದರೆ ಸರಣಿ ಸಮ ಮಾಡಿಕೊಳ್ಳಲು ರಾಜ್ಕೋಟ್ನಲ್ಲಿ ಗೆಲ್ಲಲೇಬೇಕಿತ್ತು. ಅಂದುಕೊಂಡಿದ್ದನ್ನು ಸಾಧಿಸಿ ಸರಣಿ ಸಮ ಮಾಡಿಕೊಂಡಿತು.
ಈಗ ರಿಷಭ್ ಪಂತ್ ನೇತೃತ್ವದ ಭಾರತಕ್ಕೆ ಹ್ಯಾಟ್ರಿಕ್ ಗೆಲುವಿನ ಕನಸಿದೆ. ಬೆಂಗಳೂರಿನಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಂಡರೆ ಎಲ್ಲವೂ ದಾಖಲೆಯಾಗುತ್ತದೆ. ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ನೆಲದಲ್ಲಿ ಮೊದಲ ಟಿ20 ಸರಣಿ ಗೆದ್ದಂತಾಗುತ್ತದೆ. ಇದುವರೆಗೂ ಟೀಂ ಇಂಡಿಯಾವೂ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಟಿ20 ಸರಣಿಯನ್ನು ಜಯಿಸಿಲ್ಲ. ಇದಕ್ಕೂ ಮೊದಲು 2015-16ರಲ್ಲಿ ನಡೆದಿದ್ದ 3 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಅಂತರದಲ್ಲಿ ಗೆದ್ದಿದ್ದರೆ, 2019-20ರ ಸರಣಿ 1-1ರಿಂದ ಸಮಬಲಗೊಂಡಿತ್ತು.
ಟಿ20 ಕ್ರಿಕೆಟ್ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಒಟ್ಟು 21 ಬಾರಿ ಮುಖಾಮುಖಿಯಾಗಿವೆ. ಭಾರತ 11 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದೆ. ದಕ್ಷಿಣ ಆಫ್ರಿಕಾ ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಎರಡು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ.
ಭಾರತದಲ್ಲಿ ಉಭಯ ತಂಡಗಳು 10 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೇ, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು 5 ಪಂದ್ಯಗಳನ್ನು ಜಯಿಸಿದೆ. ಇನ್ನೆರಡು ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ. ಹೀಗಾಗಿ ಇಂದು ಒಂದು ಗೆಲುವು ಟೀಮ್ಇಂಡಿಯಾದ ಹಳೆಯ ದಾಖಲೆಗಳನ್ನೆಲ್ಲಾ ಅಳಿಸಿ ಬಿಡುತ್ತದೆ.