Team India ರೋಹಿತ್ ಬಳಗ ಇಷ್ಟು ಬೇಗ ಆಸ್ಟ್ರೇಲಿಯಾಗೆ ತೆರಳಿದ್ದು ಯಾಕೆ ? ಕಾರಣ ಬಿಚ್ಚಿಟ್ಟ ಸೋಹಮ್ ದೇಸಾಯಿ..!

2022ರ ಟಿ-20 ವಿಶ್ವಕಪ್ ಆಡಲಿರುವ ಟೀಮ್ ಇಂಡಿಯಾ ಆಟಗಾರರು ಈಗ ಆಸ್ಟ್ರೇಲಿಯಾದ ಪರ್ತ್‍ನ ನಲ್ಲಿದ್ದಾರೆ. ಇಲ್ಲಿನ ವಾಕಾ ಅಂಗಣದಲ್ಲಿ ರೋಹಿತ್ ಬಳಗ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತರಬೇತಿ ನಡೆಸುತ್ತಿದ್ದಾರೆ
ಟೀಮ್ ಇಂಡಿಯಾ ವಿಶ್ವಕಪ್ ಆರಂಭವಾಗುವುದಕ್ಕಿಂತ ಎಂಟು ದಿನಗಳ ಮುಂಚೆಯೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ. ಇನ್ನೊಂದೆಡೆ ಟಿ-20 ವಿಶ್ವಕಪ್ ಆಡುತ್ತಿರುವ ಕೆಲವು ತಂಡಗಳು ಇನ್ನೂ ಕೂಡ ದ್ವೀಪಕ್ಷೀಯ ಸರಣಿಗಳನ್ನು ಆಡುತ್ತಿದೆ. ಆದ್ರೆ ಟೀಮ್ ಇಂಡಿಯಾ ಮಾತ್ರ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿದೆ.
ಈಗಾಗಲೇ ಈ ಬಗ್ಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಆಸ್ಟ್ರೇಲಿಯಾದ ವಾತಾವರಣಕ್ಕೆ ಹೊಂದಿಕೊಳ್ಳಲು ನಾವು ಅಲ್ಲಿ ತರಬೇತಿ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಹಾಗೇ ಟೀಮ್ ಇಂಡಿಯಾದಲ್ಲಿರುವ ಹೆಚ್ಚಿನ ಆಟಗಾರರು ಆಸ್ಟ್ರೇಲಿಯಾ ನೆಲದಲ್ಲಿ ಆಡಿರುವ ಅನುಭವ ಕೂಡ ಇಲ್ಲ. ಹೀಗಾಗಿ ನಾವು ತರಬೇತಿ ಶಿಬಿರ ನಡೆಸುತ್ತಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದರು.
ಇದೀಗ ಅದಕ್ಕೆ ಪೂರಕವಾಗಿ ಟೀಮ್ ಇಂಡಿಯಾದ ಸ್ಟ್ರೇಂತ್ ಮತ್ತು ಕಂಡಿಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರು ಇನ್ನಷ್ಟು ಮಾಹಿತಿಯನ್ನು ಹೇಳಿಕೊಂಡಿದ್ದಾರೆ.
ನಾವು ಪರ್ತ್‍ನ ವಾಕಾ ಅಂಗಣದಲ್ಲಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಐಸಿಸಿ ವಿಶ್ವಕಪ್‍ನ ಅಭ್ಯಾಸ ಪಂದ್ಯಕ್ಕೆ ಮುನ್ನ ನಾವು ಇಲ್ಲಿನ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಅಕ್ಟೋಬರ್ 10 ಮತ್ತು 13ರಂದು ಅಭ್ಯಾಸ ಪಂದ್ಯಗಳನ್ನು ಆಡುತ್ತೇವೆ. ಬಳಿಕ ಅಕ್ಟೋಬರ್ 17 ಮತ್ತು 19 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಐಸಿಸಿ ವಿಶ್ವಕಪ್ ನ ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ ಎಂದು ಹೇಳಿದ್ರು.
ಹಾಗೇ ಅಕ್ಟೋಬರ್ 23ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಇದು ಉಭಯ ತಂಡಗಳಿಗೂ ಈ ಬಾರಿ ವಿಶ್ವಕಪ್ ನ ಮೊದಲ ಪಂದ್ಯವಾಗಿದೆ.

ಮುಂದಿನ ಎಂಟು – ಹತ್ತು ದಿನಗಳು ಟೀಮ್ ಇಂಡಿಯಾಗೆ ಬಹಳ ಮುಖ್ಯವಾದದ್ದು. ಈಗಾಗಲೇ ಟೀಮ್ ಇಂಡಿಯಾ ಕಳೆದ ಒಂದು ವರ್ಷದಿಂದ ಸುಮಾರು ಟಿ-20 ಪಂದ್ಯಗಳನ್ನು ಆಡಿದೆ. ಸದ್ಯ ಮುಂದಿನ ಎಂಟು – ಹತ್ತು ದಿನಗಳಲ್ಲಿ ಟೀಮ್ ಇಂಡಿಯಾ ಆಟಗಾರರು ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳ್ಳಬೇಕು. ಜೊತೆಗೆ ಆಸ್ಟ್ರೇಲಿಯಾದಲ್ಲಿ ತಾಂತ್ರಿಕ ಮತ್ತು ಕೌಶಲ್ಯವಾಗಿ ಯಾವ ರೀತಿ ಆಡಬೇಕು ಎಂಬುದರ ಬಗ್ಗೆ ಗಮನಹರಿಸಲಿದ್ದೇವೆ ಸ್ಟ್ರೇಂತ್ ಮತ್ತು ಕಂಡಿಷನಿಂಗ್ ಕೋಚ್ ಸೋಹಮ್ ದೇಸಾಯಿ ಹೇಳಿದ್ದಾರೆ.
ಈ ವರ್ಷದ ಕ್ಯಾಲೆಂಡರ್ ನಲ್ಲಿ ಟೀಮ್ ಇಂಡಿಯಾ 32 ಟಿ-20 ಪಂದ್ಯಗಳನ್ನು ಆಡಿದೆ. ಇಷ್ಟು ಪಂದ್ಯಗಳನ್ನು ಯಾವ ತಂಡವೂ ಆಡಿಲ್ಲ. 21 ಟಿ-20 ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್ ಎರಡನೇ ಸ್ಥಾನದಲ್ಲಿದೆ.
https://twitter.com/i/status/1578618693390434304
ಹಾಗೇ ಟೀಮ್ ಇಂಡಿಯಾ ಮಹತ್ವದ ಟೂರ್ನಿಗೆ ಪ್ರಮುಖ ಇಬ್ಬರು ಆಟಗಾರರನ್ನು ಮಿಸ್ ಮಾಡಿಕೊಂಡಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬೂಮ್ರಾ ಅವರು ಗಾಯದಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡುತಿಲ್ಲ. ಹಾಗೇ ದೀಪಕ್ ಚಾಹರ್ ಕೂಡ ಮತ್ತೆ ಗಾಯಗೊಂಡು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸೇರಿಕೊಂಡಿದ್ದಾರೆ.