Team india – ಅಕ್ಟೋಬರ್ 6ರಂದು ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾ ಪ್ರಯಾಣ..!
ಅಕ್ಟೋಬರ್ 6ರಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಲಿದೆ. 2022ರ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ಗುರಿಯನ್ನಿಟ್ಟುಕೊಂಡಿರುವ ರೋಹಿತ್ ಬಳಗ ಅಕ್ಟೋಬರ್ 6ರಂದು ಬೆಳಗ್ಗೆ ಪರ್ತ್‍ಗೆ ಪ್ರಯಾಣ ಮಾಡಲಿದೆ.
ಈಗಾಗಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯನ್ನು ಗೆದ್ದುಕೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆದ್ರೆ ತಂಡದ ಪ್ರಮುಖ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರಿತ್ ಬೂಮ್ರಾ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಇನ್ನೊಂದೆಡೆ ಬೂಮ್ರಾ ಅವರ ಸ್ಥಾನವನ್ನು ಯಾರು ರಿಪ್ಲೇಸ್ ಮಾಡ್ತಾರೆ ಅನ್ನೋದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಮಹಮ್ಮದ್ ಶಮಿ, ದೀಪಕ್ ಚಾಹರ್ ಮತ್ತು ಉಮೇಶ್ ಯಾದವ್ ರೇಸ್ ನಲ್ಲಿದ್ದಾರೆ. ಈ ನಡುವೆ, ದೀಪಕ್ ಚಾಹರ್ ಮತ್ತು ಶಮಿ ಅವರು ಟೀಮ್ ಇಂಡಿಯಾ ಟಿ-20 ವಿಶ್ವಕಪ್ ತಂಡದ ಹೆಚ್ಚುವರಿ ಆಟಗಾರರ ಲಿಸ್ಟ್ ನಲ್ಲಿದ್ದಾರೆ. ಹೀಗಾಗಿ ಶಮಿ ಮತ್ತು ದೀಪಕ್ ಚಾಹರ್ ಪೈಕಿ ಒಬ್ಬರು 15ರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಬಹುದು.
ಇನ್ನು ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ಬೇಗನೇ ತೆರಳಲಿದೆ. ಇದಕ್ಕೆ ಕಾರಣವೂ ಇದೆ. ಹಾಗೇ ನೋಡಿದ್ರೆ ಟೀಮ್ ಇಂಡಿಯಾಗೆ ಮೊದಲ ಅಭ್ಯಾಸ ಪಂದ್ಯ ಅಕ್ಟೋಬರ್ 17ರಂದು ನಡೆಯಲಿದೆ. ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಇದಕ್ಕು ಮೊದಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಏತನ್ಮಧ್ಯೆ, ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಈ ಬಾರಿಯ ವಿಶ್ವಕಪ್ ತಂಡಕ್ಕೆ ಪ್ರತ್ಯೇಕ ಲೆಕ್ಕಚಾರಗಳನ್ನ ಕೂಡ ಹಾಕಿಕೊಂಡಿದ್ದಾರೆ. ಈಗಾಗಲೇ ಟೀಮ್ ಇಂಡಿಯಾದಲ್ಲಿ ಪ್ರಯೋಗಗಳನ್ನು ಮಾಡಿಕೊಂಡು ಬಲಿಷ್ಠ ತಂಡವನ್ನು ಕಟ್ಟಿದ್ದಾರೆ. ಆದ್ರೂ ಗಾಯದ ಸಮಸ್ಯೆ ಟೀಮ್ ಇಂಡಿಯಾಗೆ ಗಾಢವಾಗಿ ಕಾಡಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬೂಮ್ರಾ ಅವರು ಅಲಭ್ಯರಾಗಿದ್ದಾರೆ. ಆದ್ರೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಗೆ ರೋಹಿತ್ ಬಳಗ ಅತ್ಯುತ್ತಮ ಪ್ರದರ್ಶನ ನೀಡುತ್ತದೆ ಎಂಬ ವಿಶ್ವಾಸವಿದೆ.
ಇನ್ನು ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾದಲ್ಲಿ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಿದೆ. ಆಸ್ಟ್ರೇಲಿಯಾದ ವಾತಾವರಣಕ್ಕೆ ಹೊಂದಿಕೊಳ್ಳಲು ಈ ತರಬೇತಿ ಶಿಬಿರ ಅನುಕೂಲವಾಗಲಿದೆ. ಹಾಗೇ ಸ್ಥಳೀಯ ತಂಡಗಳ ಜೊತೆಗೆ ಕೆಲವೊಂದು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇದು ತಂಡಕ್ಕೆ ಹೆಚ್ಚು ಪ್ಲಸ್ ಆಗಲಿದೆ. ಅದು ಅಲ್ಲದೆ ಟಿ-20 ವಿಶ್ವಕಪ್ ತಂಡದಲ್ಲಿರುವ ಆಟಗಾರರು ಆಸ್ಟ್ರೇಲಿಯಾದ ನೆಲದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ತರಬೇತಿ ಶಿಬಿರ ಮತ್ತು ಅಭ್ಯಾಸ ಪಂದ್ಯ ಆಟಗಾರರಿಗೆ ಹೆಚ್ಚಿನ ಅನುಕೂಲವಾಗಬಹುದು ಎಂಬುದು ರಾಹುಲ್ ದ್ರಾವಿಡ್ ಅವರ ಲೆಕ್ಕಚಾರವಾಗಿದೆ.