Team India – ಜಸ್ಪ್ರಿತ್ ಬೂಮ್ರಾ ಸ್ಥಾನಕ್ಕೆ ಯಾರು ? ಶಮಿ Vs ಚಾಹರ್.. ಯಾರು ಹಿತವರು..?

ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಕಳೆದ ಆರೇಳು ತಿಂಗಳಿಂದ ಪ್ಲಾನ್ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ತಂಡದ ಆಯ್ಕೆಗಾಗಿ ಸಾಕಷ್ಟು ಪ್ರಯೋಗಳನ್ನು ಮಾಡಿದ್ದರು. ಹಾಗೇ ಇವರ ಪ್ರಯೋಗದಿಂದ ಸಾಕಷ್ಟು ಟೀಕೆಗಳು ಕೂಡ ಕೇಳಿಬಂದಿದ್ದವು. ಆದ್ರೆ ಈ ಪ್ರಯೋಗಳಿಂದ ಟೀಮ್ ಇಂಡಿಯಾ ಎರಡು ತಂಡಗಳಾಗಿ ಆಡುವ ಮಟ್ಟಕ್ಕೆ ಬೆಳೆದಿದೆ ಎನ್ನುವುದು ಹೆಮ್ಮೆಯ ವಿಚಾರ.
ಹೌದು, ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು. ಆದ್ರೆ ಟಿ-20 ವಿಶ್ವಕಪ್ ಟೂರ್ನಿಗೆ ಒಂದು ತಿಂಗಳು ಇರುವಾಗಲೇ ಟೀಮ್ ಇಂಡಿಯಾಗೆ ಆಘಾತವಾಗಿತ್ತು. ಮೊದಲಿಗೆ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡ್ರು. ಬಳಿಕ ಜಸ್ಪ್ರಿತ್ ಬೂಮ್ರಾ ಕೂಡ ಬೆನ್ನು ನೋವಿನಿಂದ ಎನ್ ಸಿಎ ಸೇರಿಕೊಂಡು ಬಿಟ್ಟಿದ್ದಾರೆ. ಇವರಿಬ್ಬರ ಗಾಯ ವಾಸಿಯಾಗಬಹುದು ಎಂಬ ನಂಬಿಕೆ ಇತ್ತು. ಆದ್ರೆ ಆ ನಂಬಿಕೆಯೇ ಹೊರಟು ಹೋಯ್ತು. ಜಡೇಜಾ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು. ಬೂಮ್ರಾ ಕೂಡ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿ ತಂಡದ ಸಮತೋಲನಕ್ಕೆ ಅಡ್ಡಿಯನ್ನುಂಟು ಮಾಡಿದೆ.

ಹಾಗಂತ ಚಿಂತಿಸುವ ಅಗತ್ಯವಿಲ್ಲ. ಇವರಿಬ್ಬರ ಜಾಗವನ್ನು ತುಂಬುವಂತಹ ಆಟಗಾರರು ಇದ್ದಾರೆ. ಆದ್ರೆ ಅನುಭವದ ಲೆಕ್ಕಚಾರದಲ್ಲಿ ಸ್ವಲ್ಪ ಹಿನ್ನಡೆಯಾದ್ರೂ ಆಗಬಹುದು. ಅದೇನೇ ಇರಲಿ, ಇವರಿಬ್ಬರ ಜಾಗವನ್ನು ಯಾರು ತುಂಬುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಜಡೇಜಾ ಸ್ಥಾನಕ್ಕೆ ಅಕ್ಷರ್ ಪಟೇಲ್ ಇದ್ರೂ ಜಡೇಜಾ ಸ್ಥಾನವನ್ನು ತುಂಬುವುದು ಕಷ್ಟ. ಆಲ್ ರೌಂಡರ್ ರವೀಂದ್ರ ಜಡೇಜಾ ಅದ್ಭುತ ಫೀಲ್ಡರ್ ಕೂಡ ಹೌದು. ಹೀಗಾಗಿ ಜಡೇಜಾ ಸ್ಥಾನ ತುಂಬುವುದು ಅಷ್ಟೊಂದು ಸುಲಭವಿಲ್ಲ.
ಇನ್ನು ಜಸ್ಪ್ರಿತ್ ಬೂಮ್ರಾ. ಡೆತ್ ಓವರ್ ಗಳಲ್ಲಿ ಮಾರಕವಾಗಿ ಕಾಡುತ್ತಾರೆ. ಇವರ ಸ್ಥಾನಕ್ಕೆ ಮಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ನಡುವೆ ಪೈಪೋಟಿ ಇದೆ. ಈ ನಡುವೆ ಶಮಿ ಕೋವಿಡ್ ನಿಂದ ಚೇತರಿಸಿಕೊಂಡ್ರೂ ಇನ್ನೂ ಫಿಟ್ ಆಗಿಲ್ಲ. ಅಲ್ಲದೆ ಅವರಿಗೆ ಅಭ್ಯಾಸದ ಕೊರತೆ ಕೂಡ ಕಾಡಲಿದೆ.
ಇನ್ನು ದೀಪಕ್ ಚಾಹರ್ ಮತ್ತೆ ಲಯವನ್ನು ಕಂಡುಕೊಂಡಿದ್ದಾರೆ. ಹಾಗೇ ಬ್ಯಾಟ್ ನಲ್ಲೂ ತಂಡಕ್ಕೆ ಆಧಾರವಾಗುತ್ತಾರೆ. ಮೇಲ್ನೋಟಕ್ಕೆ ದೀಪಕ್ ಚಾಹರ್ ಮೊದಲ ಆಯ್ಕೆಯಾದ್ರೂ ಅನುಭವದ ಲೆಕ್ಕಚಾರದಲ್ಲಿ ಮಹಮ್ಮದ್ ಶಮಿ ಸ್ಥಾನ ಪಡೆದುಕೊಂಡ್ರೂ ಅಚ್ಚರಿ ಏನಿಲ್ಲ.