ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಅಂದರೆ ಸುಲಭದ ಮಾತಲ್ಲ. ಹಾಗಂತ ಸ್ಥಾನ ಪಡೆದವರು ಎಲ್ಲರೂ ದೀರ್ಘ ಕಾಲ ಆಡುತ್ತಾರೆ ಎಂದು ಹೇಳುವ ಹಾಗಿಲ್ಲ. ಆದರೆ ಟಿ20 ಕ್ರಿಕೆಟ್ ಆರಂಭವಾದಗಿನಿಂದ ನಿಧಾನವಾಗಿ ಎಲ್ಲವೂ ಬದಲಾಗುತ್ತಿದೆ. ತಂಡದೊಳಗೆ ಎಂಟ್ರಿಕೊಟ್ಟ ಮೇಲೆ ಪ್ರದರ್ಶನ ನೀಡಿ, ತಮ್ಮ ಆಯ್ಕೆಯನ್ನು ಮತ್ತೆ ಮತ್ತೆ ಸಮರ್ಥಿಸುವ ಆಟಗಾರರಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧದ ಟಿ20 ಪಂದ್ಯಕ್ಕೂ ಟೀಮ್ ಇಂಡಿಯಾದಲ್ಲಿ ಆಯ್ಕೆಯೇ ಸಮಸ್ಯೆಯಾಗಿದೆ.
ರೋಹಿತ್ ಜೊತೆ ಆರಂಭಿಕ ಯಾರು..?
ಉಪನಾಯಕ ಕೆ.ಎಲ್. ರಾಹುಲ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ಆರಂಭಿಕ ಯಾರು ಅನ್ನುವ ಚರ್ಚೆ ಹುಟ್ಟುಹಾಕಿದೆ. ಇಶನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ರೋಹಿತ್ ಜೊತೆ ಪ್ಯಾಡ್ ಕಟ್ಟಲು ಪೈಪೋಟಿಗೆ ಬಿದ್ದಿದ್ದಾರೆ. ಇಶನ್ ಕಿಶನ್ ವಿಕೆಟ್ ಕೀಪರ್ ಆಗಿರುವುದರಿಂದ ಗಾಯಕ್ವಾಡ್ಗಿಂತ ಪೈಪೋಟಿಯಲ್ಲಿ ಮುಂದಿದ್ದಾರೆ. ಒಂದು ವೇಳೆ ರಿಷಬ್ ಪಂತ್ಗೆ ವಿರಾಮ ನೀಡಿದರೆ ಕಿಶನ್ ಫರ್ಪೆಕ್ಟ್ ಆಯ್ಕೆ ಆಗಲಿದೆ. ಈ ಮಧ್ಯೆ ವೆಂಕಟೇಶ್ ಅಯ್ಯರ್ ಕೂಡ ಆರಂಭಿಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ವೆಂಕಟೇಶ್ ಅಯ್ಯರ್ ಕೆಳ ಸರದಿಯಲ್ಲೂ ಆಡಬಹುದಾದ ಕಾರಣ ಜೊತೆ ಬೌಲಿಂಗ್ ಆಪ್ಶನ್ ಕೂಡ ಆಗಿರುವ ಕಾರಣದಿಂದ ವಾಷಿಂಗ್ಟನ್ ಸುಂದರ್ ಜಾಗದಲ್ಲಿ ಆಡಬಹುದು. ಗಾಯಕ್ವಾಡ್ ವಿರಾಟ್ ಕೊಹ್ಲಿಗೆ ವಿರಾಮ ನೀಡಿದರೆ ಸುಲಭವಾಗಿ ಜಾಗ ಪಡೆಯಬಹುದು.
ಮಿಡಲ್ ಆರ್ಡರ್ ಮತ್ತು ಲೋವರ್ ಆರ್ಡರ್
ಸುಂದರ್ ಗಾಯಗೊಂಡಿರುವುದರಿಂದ ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಕೋಟಾದಲ್ಲಿ ಆಡಬಹುದು. ಆದರೆ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಆಯ್ಕೆ ಇರಲಿದೆ. ಒಂದು ವೇಳೆ ರಿಷಬ್ ವಿರಾಮ ಪಡೆದರೆ ಇಬ್ಬರೂ ಆಡಬಹುದು. ಇಲ್ಲದೇ ಇದ್ದರೆ ಒಬ್ಬರಿಗೆ ಮಾತ್ರ ಅವಕಾಶ.
ಶಾರ್ದೂಲ್ ಥಾಕೂರ್, ದೀಪಕ್ ಚಹರ್ ಮತ್ತು ಹರ್ಷಲ್ ಪಟೇಲ್ ಕೂಡ ಆಲ್ರೌಂಡರ್ಗಳೇ. ಅಷ್ಟೇ ಅಲ್ಲ ಮಧ್ಯಮ ವೇಗಿಗಳು. ಹೀಗಾಗಿ ಈ ಮೂವರಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಸಿಗಬಹುದು. ಒಂದು ಆಯ್ಕೆ ಸ್ಪಿನ್ ಬೌಲಿಂಗ್ ಆಪ್ಶನ್ಗೆ ನೀಡಬೇಕಿದೆ. ವೇಗದ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಮೊದಲ ಆಯ್ಕೆ. ಆದರೆ ಖಲೀಲ್ ಅಹ್ಮದ್, ಜಯದೇವ್ ಉನದ್ಕಟ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಕಷ್ಟ ಪಡಬೇಕಾಗಿದೆ. ಒಟ್ಟಿನಲ್ಲಿ ಹೊಸ ನಾಯಕ ರೋಹಿತ್ ಶರ್ಮಾ ಬಳಿ ಹಲವು ಆಯ್ಕೆಗಳಿದೆ. ಆದರೆ ಪಂದ್ಯ ಗೆಲ್ಲಿಸಬಲ್ಲ ಸರಿಯಾದ ಆಯ್ಕೆ ಯಾವುದು ಅನ್ನುವುದನ್ನು ನಿರ್ಧಾರ ಮಾಡಬೇಕಿದೆ.