ಭಾರತದ ಕ್ರಿಕೆಟಿಗರಿಗೆ ಗಾಯವಾಗಿದೆಯಾ..? ನೋ ಪ್ರಾಬ್ಲಂ, ಶಸ್ತ್ರ ಚಿಕಿತ್ಸೆಯಿಂದ ಹಿಡಿದು ಫಿಟ್ ಆಗುವ ತನಕ ಆಟಗಾರರಿಗೆ ಸಲಹೆ ನೀಡಲು ಸಂಸ್ಥೆಯೊಂದಿದೆ. ಬೌಲಿಂಗ್ ಶೈಲಿ ಬಗ್ಗೆ ಆರೋಪ ಇದೆಯಾ..? ಅದನ್ನೂ ಸರಿ ಪಡಿಸಲಾಗುತ್ತದೆ. ಫಿಟ್ ನೆಸ್ ಸಮಸ್ಯೆ ಇದೆಯಾ..? ಅದಕ್ಕೂ ಇಲ್ಲಿ ಪರಿಹಾರವಿದೆ. ಯಸ್.. ಇದು ಭಾರತೀಯ ಕ್ರಿಕೆಟ್ನ ಫ್ಯಾಕ್ಟರಿ. ಆಟಗಾರರನ್ನು ತಯಾರು ಮಾಡಿ ಟೀಮ್ ಇಂಡಿಯಾಕ್ಕೆ ಮತ್ತು ರಣಜಿ ತಂಡಗಳಿಗೆ ನೀಡುವ ಜವಾಬ್ದಾರಿಯುತ ಸಂಸ್ಥೆ. NCA ಅಂದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಅಥವಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ.
ಭಾರತೀಯ ಕ್ರಿಕೆಟ್ಗೆ ಕ್ರಿಕೆಟಿಗರನ್ನು ಸಪ್ಲೈ ಮಾಡುವ ಸೈಲೆಂಟ್ ಸಂಸ್ಥೆ ಇದು. ಅಂದಹಾಗೇ ಇದು ಇರುವುದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಗಾರ್ಡನ್ ಸಿಟಿಯ ಕ್ರಿಕೆಟ್ ಹೆಮ್ಮೆ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಸದ್ಯ NCA ಕಾರ್ಯ ನಿರ್ವಹಿಸುತ್ತಿದೆ. ಆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಇದು ಚಿನ್ನಸ್ವಾಮಿ ಬಳಿಯಿಂದ ಕೊಡಿಗೆ ಹಳ್ಳಿಗೆ ಶಿಫ್ಟ್ ಆಗಲಿದೆ. ಅಷ್ಟೇ ಅಲ್ಲ ಬಿಸಿಸಿಐ ಎನ್ಸಿಎಯನ್ನು ಹೈಟೆಕ್ ಮಾಡಲಿದೆ.
ಹೊಸದಾಗಿ ಆರಂಭವಾಗುವ ಹೈಟೆಕ್ ಎನ್ಸಿಎನಲ್ಲಿ 16000 ಚದರ ಅಡಿಯ ಜಿಮ್ ಇರಲಿದೆ. 40 ಪ್ರಾಕ್ಟೀಸ್ ಪಿಚ್ಗಳು ಇರಲಿದೆ. ಈ ಪೈಕಿ 20 ಪಿಚ್ಗಳಿಗೆ ಫ್ಲಡ್ಲೈಟ್ ವ್ಯವಸ್ಥೆ ಇರಲಿದೆ. 243 ರೂಮ್ಗಳು ಇಲ್ಲಿ ಕ್ರಿಕೆಟಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆಗೆ ಸಹಾಯ ಮಾಡಲಿದೆ. ಓಪನ್ ಏರ್ ಥಿಯೇಟರ್ ಹೈಟೆಕ್ ಎನ್ಸಿಎಯ ಭಾಗವಾಗಿರಲಿದೆ.
ಹೈಟೆಕ್ ಆಗಿ ಪರಿವರ್ತನೆಯಾಗಲಿರುವ ಎನ್ಸಿಎನಲ್ಲಿ ಸ್ಕ್ವಾಷ್, ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ಟೆನಿಸ್, ಸೈಕ್ಲಿಂಗ್ ಟ್ರ್ಯಾಕ್ ಇರಲಿದೆ. ಟೆಂಪರೇಚರ್ ಕಂಟ್ರೋಲ್ ಮಾಡಬಲ್ಲ ಸ್ಮಿಮ್ಮಿಂಗ್ ಪೂಲ್ಗೆ ಕೂಡ ಬ್ಲೂ ಪ್ರಿಂಟ್ ಸಿದ್ಧವಾಗಿದೆ. ಮೆಡಿಕಲ್, ಕೊರಿಯರ್, ಬ್ಯಾಂಕ್, ಎಟಿಎಂ ಸೇರಿದಂತೆ ದೇವನಹಳ್ಳಿ ತಾಲೂಕಿನ ಕೊಡಿಗೆಹಳ್ಳಿ ಗ್ರಾಮದಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಎನ್ಸಿಎ ಹೈಟೆಕ್ ಸ್ಪರ್ಷ ಪಡೆಯಲಿದೆ.
ಬಿಸಿಸಿಐ 99 ವರ್ಷಗಳಿಗೆ KIADB ಯಿಂದ 50 ಕೋಟಿ ಕೊಟ್ಟು ಗುತ್ತಿಗೆ ಪಡೆದುಕೊಂಡಿದೆ. ಕಳೆದ 22 ವರ್ಷಗಳಿಂದ ಎನ್ಸಿಎ ಚಿನ್ನಸ್ವಾಮಿ ಬಗಲಿನಲ್ಲೇ ಸೈಲೆಂಟಾಗಿ ನೂರಾರು ಕ್ರಿಕೆಟಿಗರನ್ನು ಟೀಮ್ ಇಂಡಿಯಾಕ್ಕೆ ಕೊಟ್ಟಿದೆ.
NCA ಭಾರತೀಯ ಕ್ರಿಕೆಟ್ ಮಟ್ಟಿಗೆ ಹೆಡ್ ಕೋಚಿಂಗ್ ಸೆಂಟರ್. ಇಲ್ಲಿಗೆ ಬರುವ ಕ್ರಿಕೆಟಿಗರು ಆಟದ ಪಾಠದ ಜೊತೆ ಶಿಸ್ತು ಬೆಳೆಸಿಕೊಳ್ಳುತ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ. ಆದರೆ ಬಿಸಿಸಿಐ ಜೊತೆಗಿರುವ NCA ಮಾತ್ರ ಯಾರಿಗೂ ಕಾಣದ ಹಾಗೆ ಸುಮ್ಮನೆ ತನ್ನ ಪಾಡಿಗೆ ತಾನಿದೆ. ಕೆಲಸ ಮಾತನಾಡಬೇಕು, ಮಾತೇ ಕೆಲಸವಾಗಬಾರದು ಅನ್ನುವುದನ್ನು NCA ಚಾಚೂ ತಪ್ಪದೆ ಪಾಲಿಸುತ್ತಿದೆ.