ಆರಂಭಿಕ ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅವರ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ಮೂರನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 180 ರನ್ ಗುರಿ ನೀಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಕಂಡಿತು. ಟೀಮ್ ಇಂಡಿಯಾದ ಆರಂಭಿಕರು ಭರ್ಜರಿ ಆಟದ ಪ್ರದರ್ಶನ ನೀಡಿದರು. ಪವರ್ ಪ್ಲೇ ನಲ್ಲಿ ಪವರ್ ಫುಲ್ ಆಟದ ಪ್ರದರ್ಶನ ನೀಡಿದ ಋತುರಾಜ್ ಹಾಗೂ ಇಶಾನ್ ಜೋಡಿ ದಕ್ಷಿಣ ಆಫ್ರಿಕಾದ ಬೌಲರ್ ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು.

ಆರಂಭಿಕ ಜೋಡಿ 10 ಓವರ್ ಗಳಲ್ಲಿ 97 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಋತುರಾಜ್ 35 ಎಸೆತಗಳಲ್ಲಿ 57 ರನ್ ಬಾರಿಸಿದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 7 ಬೌಂಡರಿ, 2 ಸಿಕ್ಸರ್ ಸೇರಿವೆ.

ಸೊಗಸಾದ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ ಅಬ್ಬರಿಸಿದರು. ಇಶಾನ್ 35 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿದರು.
ಒಂದು ಹಂತದಲ್ಲಿ 1 ವಿಕೆಟ್ ಗೆ 128 ರನ್ ಗಳನ್ನು ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 30 ರನ್ ಸೇರಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ (14), ರಿಷಭ್ ಪಂತ್ (6), ಭರವಸೆಯ ಆಟಗಾರ ದಿನೇಶ್ ಕಾರ್ತಿಕ್ (6) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಡೆತ್ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ ಅಜೇಯ 31 ರನ್ ಕಲೆ ಹಾಕಿ ತಂಡದ ಮೊತ್ತ ಹಿಗ್ಗಿಸಿದರು. ಪರಿಣಾಮ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಸೇರಿಸಿತು.
ದಕ್ಷಿಣ ಆಫ್ರಿಕಾದ ಪರ ಡ್ವೆನ್ ಪ್ರಿಟೋರಿಯಸ್ ಎರಡು, ತಬ್ರೇಜ್ ಶಂಶಿ, ಕಗಿಸೊ ರಬಾಡ, ಕೇಶವ್ ಮಹರಾಜ್ ತಲಾ ಒಂದು ವಿಕೆಟ್ ಪಡೆದರು.