ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಜಮ್ಮು ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್ ಅವರನ್ನು ಆಯ್ಕೆ ಮಾಡಲಾಗಿದೆ, ಆದರೆ ಅವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಭಾರತದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಉಮ್ರಾನ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಅವರನ್ನು ತೀವ್ರವಾಗಿ ಹೊಗಳಿರುವ ಅವರು, ಸಚಿನ್ ತೆಂಡೂಲ್ಕರ್ ನಂತರ ಯಾವುದೇ ಆಟಗಾರನ ಪ್ರತಿಭೆಯನ್ನು ನೋಡಲು ತಾವು ಉತ್ಸುಕನಾಗಿದ್ದಾಗಿ ತಿಳಿಸಿದ್ದಾರೆ.
ಸುನಿಲ್ ಗವಾಸ್ಕರ್ ಸಂದರ್ಶನದಲ್ಲಿ, ‘ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತಕ್ಕಾಗಿ ಆಡುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಟೀಮ್ ಇಂಡಿಯಾ ಮೂರನೇ ಪಂದ್ಯವನ್ನು ಮೊದಲು ಗೆದ್ದು ನಂತರ ಅವರಿಗೆ ಆಡಲು ಅವಕಾಶ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಟೀಂ ಇಂಡಿಯಾ ಇರುವ ಪರಿಸ್ಥಿತಿಯಲ್ಲಿ ಅವರು ಪ್ರಯೋಗ ಮಾಡಲು ಬಯಸುವುದಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳಲ್ಲಿ ಸೋತಿದೆ. ಎರಡೂ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ದೊಡ್ಡ ಸಮಸ್ಯೆಯಾಗಿದೆ. ಈ ಕುರಿತು ಗವಾಸ್ಕರ್ ಅವರು, ‘ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಾಲ್ ಹೊರತುಪಡಿಸಿ ಟೀಂ ಇಂಡಿಯಾದ ಬಳಿ ಯಾವುದೇ ವಿಕೆಟ್ ತೆಗೆದುಕೊಳ್ಳುವ ಬೌಲರ್ ಇಲ್ಲ, ಆದ್ದರಿಂದ ನೀವು ವಿಕೆಟ್ ಕಬಳಿಸಿ ನಂತರ ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕಿದೆ’ ಎಂದು ಗವಾಸ್ಕರ್ ಹೇಳಿದ್ದಾರೆ.

ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವಾಗ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದರು. ಉಮ್ರಾನ್ ಅವರನ್ನು ಹೈದರಾಬಾದ್ ತಂಡ ಉಳಿಸಿಕೊಂಡಿತ್ತು. ಈ ವೇಳೆ ಉಮ್ರಾನ್ ಮಲಿಕ್ 25 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದಿದ್ದು ಉತ್ತಮ ಪ್ರದರ್ಶನವಾಗಿತ್ತು. ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ನಿರಂತರವಾಗಿ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. 157 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದು ಎಲ್ಲರನ್ನು ಅಚ್ಚರಿಗೊಳಿಸಿದರು ಮತ್ತು ಐಪಿಎಲ್‌ನ ಎರಡನೇ ವೇಗದ ಬೌಲರ್ ಎನಿಸಿಕೊಂಡರು.