ಟೀಮ್ಇಂಡಿಯಾ ಕ್ರಿಕೆಟಿಗರು ಪುರುಸೊತ್ತಿಲ್ಲದಷ್ಟು ಕ್ರಿಕೆಟ್ ಆಡಬೇಕಿದೆ. ಐಪಿಎಲ್ ಬಳಿಕ ಸಣ್ಣ ಬ್ರೇಕ್ನಲ್ಲಿರುವ ಟೀಮ್ ಇಂಡಿಯಾಕ್ಕೆ ಬೆನ್ನು ಬೆನ್ನಿಗೆ ಸರಣಿಗಳಿವೆ. ಒಂದು ಸರಣಿ ಮುಗಿದು ಹೋಯಿತು ಅನ್ನುವಷ್ಟರಲ್ಲಿ ಮತ್ತೊಂದು ಸರಣಿ ಎದುರಾಗುತ್ತದೆ. ಒಂದು ಲೆಕ್ಕದಲ್ಲಿ ಮುಂದಿದೆ ಮಾರಿಹಬ್ಬ ಅನ್ನುವ ಹಾಗಿದೆ ಬ್ಯಾಕ್ ಟು ಬ್ಯಾಕ್ ಸರಣಿಗಳು.
ದಕ್ಷಿಣ ಆಫ್ರಿಕಾ 5 ಟಿ20 ಪಂದ್ಯ:
ಟೀಮ್ ಇಂಡಿಯಾದ ಅಂತರಾಷ್ಟ್ರೀಯ ಅಭಿಯಾನ ಆರಂಭವಾಗುವುದು ಇಲ್ಲಿಂದ. ಜೂನ್ 9 ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 5 ಟಿ20 ಪಂದ್ಯಗಳಿವೆ. ಇದು ಜಸ್ಟ್ ಆರಂಭವಷ್ಟೇ. ಆದರೆ ಇದು ಮುಗಿಸಿಕೊಂಡು ಉಸಿರಾಡುವ ಹೊತ್ತಲ್ಲಿ ಇಂಗ್ಲೆಂಡ್ನಲ್ಲಿರ ಬೇಕಿದೆ.
ಐರ್ಲೆಂಡ್ ವಿರುದ್ಧ 3 ಟಿ20 ಮ್ಯಾಚ್:
ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 3 ಟಿ20 ಪಂದ್ಯಗಳನ್ನು ಆಡಲು ಶೆಡ್ಯೂಲ್ ಫಿಕ್ಸ್ ಆಗಿದೆ. ಇದು ಕೇವಲ 3 ಪಂದ್ಯಗಳ ಚುಟುಕು ಸರಣಿಯಾದರೂ ಟೀಮ್ ಇಂಡಿಯಾದ ಆಟಗಾರರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲೇಬೇಕಾಗುತ್ತದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯ:
ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಭಾರತ ಹಿಂದಿನ ಪ್ರವಾಸದಲ್ಲಿ ಉಳಿಸಿಕೊಂಡಿತ್ತು. ಅದನ್ನು ಆಡಿದ ಮೇಲೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಇಷ್ಟು ಸಾಕಾಗಲ್ಲ ಅನ್ನುವುದಕ್ಕೆ 3 ಟಿ20 ಪಂದ್ಯಗಳನ್ನೂ ಆಡಬೇಕಿದೆ.
ವಿಂಡೀಸ್ ವಿರುದ್ಧ ತವರಿನಲ್ಲಿ ಆಟ:
ವೆಸ್ಟ್ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ತವರಿನಲ್ಲಿ ಆಟ ಆಡಬೇಕಿದೆ. 3 ಏಕದಿನ ಪಂದ್ಯಗಳು ಮತ್ತು 5 ಟಿ20 ಪಂದ್ಯಗಳು ಈ ಸರಣಿಯಲ್ಲಿವೆ. ಇದು ವಿಶ್ವಕಪ್ಗೂ ಮುನ್ ನಡೆಯುವ ಸರಣಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್:
ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದೆ. ಅಕ್ಟೋಬರ್ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಟೀಮ್ಇಂಡಿಯಾ ಫೈನಲ್ ತಲುಪಿದರೆ ಕನಿಷ್ಠ 8 ಪಂದ್ಯಗಳನ್ನು ಆಡಬೇಕಾಗುತ್ತದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ವಿರಾಮ ಸಿಕ್ಕಿದರೆ ಅದೇ ದೊಡ್ಡದು ಅನ್ನುವ ಹಾಗಾಗಿದೆ.