ಅಮೋಘ ಪ್ರದರ್ಶನದ ಮೂಲಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಧವನ್ ಪಡೆ ಆಸ್ಟ್ರೇಲಿಯಾ ತಂಡದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.
ಹರಿಣಗಳ ವಿರುದ್ಧ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಈ ವರ್ಷ 38ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದ ಸಾಧನೆ ಮಾಡಿದೆ.
ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿತ್ತು.
2003ರ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಅಂದು ಆ ವರ್ಷ 38 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತ್ತು.
8 ಟೆಸ್ಟ್ ಹಾಗೂ 30 ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು.ಇದಾದ ನಂತರ ಯಾವ ತಂಡ ಕೂಡ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.
ಇದೀಗ ಟೀಮ್ ಇಂಡಿಯಾ ಪ್ರಸಕ್ತ ವರ್ಷ 38ನೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ಕಾಂಗರೂಗಳ ದಾಖಲೆಯನ್ನು ಸರಿಗಟ್ಟಿದೆ.
ಈ ವರ್ಷ ಭಾರತ ತಂಡ 2 ಟೆಸ್ಟ್, 13 ಒಡಿಐ ಹಾಗೂ 23 ಟಿ20 ಪಂದ್ಯಗಳನ್ನು ಗೆದ್ದುಕೊಂಡಿದೆ.ಅ.23ರಂದು ಬದ್ಧ ವೈರಿ ಪಾಕಿಸ್ತಾನ ವಿರುದ್ದ ಟಿ20 ವಿಶ್ವಕಪ್ ನಲ್ಲಿ ಗೆದ್ದರೆ ಭಾರತ ವಿಶ್ವ ದಾಖಲೆಯನ್ನು ಬರೆಯಲಿದೆ.