ಟೀಮ್ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಕಟಕ್ನ ಭಾರಾಮತಿ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಒಂದು ರೀತಿಯಲ್ಲಿ ಮಾಡು ಇಲ್ಲವೆ ಮಡಿ ಇದ್ದ ಹಾಗೇ.
ತಾಂತ್ರಿಕವಾಗಿ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೂ ಸರಣಿ ಸೋತ ಹಾಗೆ ಆಗುವುದಿಲ್ಲ. ಆದರೆ ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಎಡವಿದ್ರೂ ಸರಣಿ ಸೋಲು ಕಟ್ಟಿಟ್ಟ ಬುತ್ತಿ. ಹೀಗಾಗಿ ರಿಷಬ್ ಪಂತ್ ಬಳಗ ಕಂ ಬ್ಯಾಕ್ ಮಾಡಲೇ ಬೇಕಿದೆ. ಒಂದು ವೇಳೆ ಮತ್ತೆ ಎಡವಿದರೆ ಸರಣಿ ಗೆಲುವಿನ ಆಸೆ ಕೈ ಬಿಡಬೇಕಾದ ಸ್ಥಿತಿಗೆ ಬರುತ್ತದೆ.
ಕಟಕ್ನ ಭಾರಾಮತಿ ಅಂಗಣದಲ್ಲಿ ಟೀಮ್ ಇಂಡಿಯಾ ಹಿಂದಿನ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮರೆತು ಆಡಬೇಕಿದೆ. ಆಗಿದ್ದು ಆಗಿ ಹೋಗಿದೆ, ಮುಂದೇನು ಅನ್ನುವ ಬಗ್ಗೆ ಮಾತ್ರ ಯೋಚನೆ ಮಾಡಿದರೆ ಪಾಸಿಟಿವ್ ಫಲಿತಾಂಶ ಬರಬಹುದು. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್ಅಪ್ ಕಟ್ಟಿ ಹಾಕಲು ಹೊಸ ತಂತ್ರವನ್ನು ಕೂಡ ಹುಡುಕುವ ಜವಾಬ್ದಾರಿ ಟೀಮ್ ಇಂಡಿಯಾಕ್ಕಿದೆ.
ಟಿ20 ಕ್ರಿಕೆಟ್ನಲ್ಲಿ ಕೇವಲ ಸ್ಪಿನ್ ಮೂಲಕ ಪಂದ್ಯ ಗೆಲ್ಲಬಹುದು ಅನ್ನುವ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ಮೊದಲು ಕೈ ಬಿಡಬೇಕಿದೆ. ಪಿಚ್ ಸ್ಪಿನ್ ಫ್ರೆಂಡ್ಲಿ ಇದ್ದರೂ ಸ್ಪಿನ್ನರ್ಗಳು ಬೌಲಿಂಗ್ ಅರಂಭಿಸುವ ಮೊದಲೇ ದಕ್ಷಿಣ ಆಫ್ರಿಕಾ ಪಂದ್ಯವನ್ನು ದೂರ ತೆಗೆದುಕೊಂಡು ಹೋದರೆ ರಣತಂತ್ರ ಉಲ್ಟಾ ಆಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ.
ರಿಷಬ್ ಪಂತ್ ನಾಯಕತ್ವಕ್ಕೂ ಇದು ಅಗ್ನಿ ಪರೀಕ್ಷೆ. ಮೊದಲ ಪಂದ್ಯದಲ್ಲಿ ಬೌಲಿಂಗ್ ಬದಲಾವಣೆ ವೇಳೆ ಮಾಡಿದ ಎಡವಟ್ಟು ಮತ್ತೆ ನಡೆದರೆ ಫಲಿತಾಂಶದಲ್ಲೂ ವ್ಯತ್ಯಾಸ ಆಗುವುದು ಖಚಿತ. ಒಟ್ಟಿನಲ್ಲಿ ಟೀಮ್ ಇಂಡಿಯಾ ಸಾಂಘೀಕವಾಗಿ ಆಟ ಆಡುವ ಜೊತೆಗೆ ಬದಲಾವಣೆಯನ್ನೂ ಮಾಡಿಕೊಳ್ಳಬೇಕಿದೆ.