Team india – ಇಂದು ದ್ರಾವಿಡ್ ಮಾಡಿದ್ದು ಸರಿಯಾದ್ರೆ, ಅಂದು ಧೋನಿ ಮಾಡಿದ್ದು ತಪ್ಪಾ ?

ಕಾಲ ಚಕ್ರ ತಿರುಗಿ ಬಂದೇ ಬರುತ್ತೆ.. ಅದು ಯಾರನ್ನು ಬಿಡುವುದಿಲ್ಲ. ಮೇಲೇರಿದವನು ಕೆಳಗೆ ಬೀಳಲೇಬೇಕು ಅನ್ನೋದು ಈ ಜಗದ ನಿಯಮ..!
ಇದು ಕ್ರಿಕೆಟ್ ಜಗತ್ತನ್ನು ಬಿಟ್ಟಿಲ್ಲ. ಹೀರೋ ಆದವರು ಝಿರೋ ಆಗ್ತಾರೆ.. ಝಿರೋದಲ್ಲಿದ್ದವರು ಹೀರೋ ಆಗ್ತಾರೆ. ಯಾರು ಯಾವಾಗ ಏನು ಆಗ್ತಾರೆ ಅನ್ನೋದು ತಿಳಿದುಕೊಳ್ಳುವುದು ಕಷ್ಟ.. ಕಷ್ಟ..!
ಅಂದ ಹಾಗೇ ಈ ಎಲ್ಲಾ ಪೀಠಿಕೆಗಳು ಯಾಕೆ ಬಂದಿವೆ ಅಂತ ಕೇಳಿದ್ರೆ ಉತ್ತರ ಹೀಗಿದೆ.
ನಿಮಗೆ ಗೊತ್ತೇ ಇದೆ. ವೃದ್ದಿಮಾನ್ ಸಾಹಾ ಗೆ ಟೀಮ್ ಇಂಡಿಯದ ಹೆಡ್ ಕೋಚ್ ರಾಹುಲ್ ದ್ರಾವಿಡ್ ನಿವೃತ್ತಿ ಹೇಳುವಂತೆ ಸೂಚನೆ ನೀಡಿದ್ದಾರೆ. ಈ ವಿಷ್ಯವನ್ನು ಸ್ವತಃ ವೃದ್ದಿಮಾನ್ ಸಾಹಾ ಅವರೇ ಹೇಳಿಕೊಂಡಿದ್ದಾರೆ. ಅದೇ ರೀತಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ವೃದ್ದಿಮಾನ್ ಸಾಹಾ ಆರೋಪ ಮಾಡಿದ್ದಾರೆ.
ಸಹಜವಾಗಿಯೇ ವೃದ್ದಿಮಾನ್ ಗೆ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಬಗ್ಗೆ ಬೇಸರವಾಗಿದೆ. ಆದ್ರೆ ವೃದ್ದಿಮಾನ್ ಸಹಾ ಅರ್ಥ ಮಾಡಿಕೊಳ್ಳಬೇಕು. ವಯಸ್ಸು 37 ದಾಟಿದೆ. ಆದ್ರೂ ಟೀಮ್ ಇಂಡಿಯಾದಲ್ಲಿ ಇನ್ನೂ ಆಡುತ್ತೇನೆ ಅನ್ನೋ ವಿಶ್ವಾಸವಿದೆ. ಆದ್ರೆ ವೃದ್ದಿಮಾನ್ ಸಾಹಾಗೆ ಅವಕಾಶಗಳು ಇದೆಯಾ ಅನ್ನೋದನ್ನು ತಿಳಿದುಕೊಳ್ಳಬೇಕು. ರಿಷಬ್ ಪಂತ್, ಇಶಾನ್ ಕಿಶಾನ್, ಭರತ್ ನಂತಹ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅಂತಹುದರಲ್ಲಿ ಹಿರಿಯ ಆಟಗಾರನಾಗಿರುವ ವೃದ್ದಿಮಾನ್ ಗೆ ಅವಕಾಶ ಸಿಗುತ್ತಾ ಅನ್ನೋದನ್ನು ವೃದ್ದಿಮಾನ್ ಸಾಹಾ ಅರಿತುಕೊಳ್ಳಬೇಕು.
ಇದು ವೃದ್ದಿಮಾನ್ ಸಾಹಾ ಕಥೆಯಾದ್ರೆ, ಇದೇ ಪರಿಸ್ಥಿತಿಯನ್ನು ಇದೇ ರಾಹುಲ್ ದ್ರಾವಿಡ್, ಇದೇ ಸೌರವ್ ಗಂಗೂಲಿ, ಇದೇ ವಿವಿಎಸ್ ಲಕ್ಷ್ಮಣ್, ಇದೇ ವೀರೇಂದ್ರ ಸೆಹ್ವಾಗ್, ಇದೇ ಯುವ ರಾಜ್ ಸಿಂಗ್, ಇದೇ ಅನಿಲ್ ಕುಂಬ್ಳೆ, ಇದೇ ಇರ್ಫಾನ್ ಪಠಾಣ್ ನಂತಹ ಆಟಗಾರರು ಟೀಮ್ ಇಂಡಿಯಾದಲ್ಲಿರುವಾಗ ತಮ್ಮ ವೃತ್ತಿ ಬದುಕಿನ ಕೊನೆಯ ಘಟ್ಟದಲ್ಲಿ ಅನುಭವಿಸಿದ್ದಾರೆ. ಅದನ್ನು ಈಗ ಎಲ್ಲರೂ ಮರೆತಿದ್ದಾರೆ.
ಆಗ ಈ ಮೇಲಿನ ಆಟಗಾರರು ಮೂಲೆಗುಂಪು ಆಗಲು ಕಾರಣ ಆಗಿನ ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತ ಎಲ್ಲರು ಟೀಕೆ ಮಾಡುತ್ತಿದ್ದರು.
ಆದ್ರೆ ಈಗ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಮಾಡಿದ್ದದೇನು ? ಅಂದಿನ ಟೀಮ್ ಮ್ಯಾನೇಜ್ ಮೆಂಟ್ ಮಾಡಿದ್ದನ್ನೇ ಇಂದು ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಮಾಡಿದ್ದಾರೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಮಾತಿದೆಯಲ್ಲ. ಅದೇ ರೀತಿ ಆಗುತ್ತಿದೆ.
ಯುವ ಆಟಗಾರರಿಗೆ ಅವಕಾಶ ನೀಡಿ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಬೇಕು ಎಂಬುದು ಅಂದು ಧೋನಿಯ ಉದ್ದೇಶವಾಗಿತ್ತು. ಅದಕ್ಕಾಗಿ ಹಿರಿಯ ಆಟಗಾರರನ್ನು ಗೋಲ್ಡನ್ ಶೇಕ್ ಹ್ಯಾಂಡ್ ಮೂಲಕ ನಿವೃತ್ತಿ ಮಾಡುವಂತೆ ಮಾಡಿದ್ದರು. ಹಾಗಂತ ಕಾರಣವಿಲ್ಲದೆ ನಿವೃತ್ತಿ ನೀಡುವಂತೆ ಮಾಡಲಿಲ್ಲ. ದ್ರಾವಿಡ್, ಕುಂಬ್ಳೆ, ಗಂಗೂಲಿ, ಸೆಹ್ವಾಗ್, ಲಕ್ಷ್ಮಣ್ ಎಲ್ಲರೂ ಕೂಡ ಕೆಟ್ಟ ಫಾರ್ಮ್ ನಲ್ಲಿದ್ದರು. ಹಾಗಾಗಿ ಧೋನಿ ಯುವ ಆಟಗಾರರಿಗೆ ಅವಕಾಶ ನೀಡಲು ಮುಂದಾಗಿದ್ರು. ಇದರ ಫಲವಾಗಿಯೇ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ನಂತಹ ಆಟಗಾರರು ಬೆಳಕಿಗೆ ಬಂದ್ರು. team india – mahendrasingh dhoni- rahul dravid and sourav ganguly
ಅಚ್ಚರಿಯಂದ್ರೆ ಇಂದು ಚೇತೇಶ್ವರ ಪೂಜಾರ,ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾದಿಂದ ದೂರವಾಗುತ್ತಿದ್ದಾರೆ. ಕಾರಣ ಮತ್ತೆ ಕಳಪೆ ಫಾರ್ಮ್. ಹಾಗೇ ವೃದ್ದಿಮಾನ್ ಸಾಹಾಗೂ ಆಗಿದೆ.
ಇದೀಗ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್. ಸೌರವ್ ಗಂಗೂಲಿ ಬಿಸಿಸಿಐ ಬಾಸ್… ಲಕ್ಷ್ಮಣ್ ಎನ್ ಸಿಎ ಮುಖ್ಯಸ್ಥ. ಈ ಮೂವರ ಉದ್ದೇಶ ಭವಿಷ್ಯದ ಟೀಮ್ ಇಂಡಿಯಾ ಬಲಿಷ್ಠವಾಗಿರಬೇಕು ಎಂಬುದು. ಅದಕ್ಕೆ ತಕ್ಕಂತೆ ತಂಡವನ್ನು ಕಟ್ಟುತ್ತಿದ್ದಾರೆ. ಅದಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಹಾಗಂತ ಇದು ಸರಿಯಾದ ನಿರ್ಧಾರವಾದ್ರೆ, ಅಂದು ಧೋನಿ ಟೀಮ್ ಮ್ಯಾನೇಜ್ ಮೆಂಟ್ ಗೆ ಸಲಹೆ ನೀಡಿ ಯಂಗ್ ಇಂಡಿಯಾವನ್ನು ಕಟ್ಟಲು ಮುಂದಾಗಿದ್ದು ತಪ್ಪಾ ?