Team India – ಈ ವಾರ ಕೆ.ಎಲ್. ರಾಹುಲ್ -ಕುಲದೀಪ್ ಫಿಟ್ ನೆಸ್ ಟೆಸ್ಟ್..!

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಅವರು ಫುಲ್ ಫಿಟ್ ಆಗ್ತಾರಾ ಅನ್ನೋದು ಈಗ ಮುಖ್ಯ ಪ್ರಶ್ನೆಯಾಗಿ ಕಾಡುತ್ತಿದೆ.
ತೊಡೆ ಸಂದು ನೋವಿಗೆ ಜರ್ಮನಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಮತ್ತೆ ಅಭ್ಯಾಸದಲ್ಲಿ ಕೆ.ಎಲ್. ರಾಹುಲ್ ಅವರು ನಿರತರಾಗಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆ.ಎಲ್. ರಾಹುಲ್ ಬ್ಯಾಟಿಂಗ್ ತಾಲೀಮು ನಡೆಸುತ್ತಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಕೆ.ಎಲ್. ರಾಹುಲ್ ಮತ್ತು ಸ್ಪಿನ್ನರ್ ಕುಲ್ ದೀಪ್ ಯಾದವ್ ಕೂಡ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಆಯ್ಕೆಯಾಗಿದ್ದಾರೆ. ಇವರಿಬ್ಬರು ಕೂಡ ವೆಸ್ಟ್ ಇಂಡೀಸ್ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಕುಲದೀಪ್ ಯಾದವ್ ಶೇ.80ರಷ್ಟು ಫಿಟ್ ಆಗಿದ್ದಾರೆ.
ಅಂದ ಹಾಗೇ ಇವರಿಬ್ಬರ ಫಿಟ್ ನೆಸ್ ಟೆಸ್ಟ್ ಈ ವಾರದಲ್ಲಿ ನಡೆಯಲಿದೆ. ಫಿಟ್ ನೆಸ್ ಟೆಸ್ಟ್ ನಲ್ಲಿ ಪಾಸ್ ಆದ್ರೆ ಮಾತ್ರ ಇವರಿಬ್ಬರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡಲಿದ್ದಾರೆ.
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರಿತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರಲ್ಲಿ ಕೊಹ್ಲಿ ಬಿಟ್ಟು ಇನ್ನುಳಿದ ಆಟಗಾರರು ಟಿ-20 ಸರಣಿಯಲ್ಲಿ ಆಡಲಿದ್ದಾರೆ.

ಕುಲದೀಪ್ ಯಾದವ್ ಅವರು ದಕ್ಷಿಣ ಆಫ್ರಿಕಾ ವಿರುದ್ದದ ಟಿ-20 ಸರಣಿಯ ವೇಳೆ ಗಾಯಗೊಂಡಿದ್ದರು. ಅದೇ ರೀತಿ ಕೆ.ಎಲ್. ರಾಹುಲ್ ಅವರು ಐಪಿಎಲ್ ನಂತರ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯನ್ನು ಮಿಸ್ ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ದದ ಟಿ-20 ಸರಣಿಗೆ ತಂಡದ ನಾಯಕನಾಗಿದ್ದ ಕೆ.ಎಲ್. ರಾಹುಲ್ ಅವರಿಗೆ ಅಭ್ಯಾಸದ ವೇಳೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು.
ಒಟ್ಟಿನಲ್ಲಿ ಕೆ.ಎಲ್.ರಾಹುಲ್ ಮತ್ತು ಕುಲದೀಪ್ ಯಾದವ್ ಅವರು ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಯನ್ನಾಡ್ತಾರೋ ಇಲ್ವೋ ಅನ್ನುವುದು ಈ ವಾರಂತ್ಯದಲ್ಲಿ ಗೊತ್ತಾಗುತ್ತದೆ.