ಒಂದಾದ ಮೇಲೊಂದು ಶತಕ, ಆಡಿದ್ದೆಲ್ಲವೂ ಬಿಗ್ ಇನ್ನಿಂಗ್ಸ್ಗಳೇ.. ಸಚಿನ್ ಹೆಸರಿನಲ್ಲಿರುವ 100 ಅಂತರಾಷ್ಟ್ರೀಯ ಶತಕಗಳ ಸಮೀಪಕ್ಕೆ ಅಥವಾ ಆ ದಾಖಲೆಯನ್ನು ಮುರಿಯುವ ತಾಕತ್ತು ಹೊಂದಿರುವ ಆಟಗಾರ ಎಂದೇ ವಿರಾಟ್ ಕೊಹ್ಲಿ ಬಿಂಬಿಸಿಕೊಂಡಿದ್ದರು. ಆದರೆ ಶತಕಗಳ ಸರದಾರನಿಗೆ ಇತ್ತೀಚೆಗೆ ಮೂರಂಕಿ ಸಂಭ್ರಮದ ಬರ ಕಾಡುತ್ತಿದೆ. ಅದೂ ಒಂದೆರಡು ತಿಂಗಳುಗಳಿಂದ ಅಲ್ಲ, ಬದಲಾಗಿ ಬರೋಬ್ಬರಿ 3 ವರ್ಷಗಳಿಂದ.
ಇದು ಅಚ್ಚರಿ ಆಗಿದ್ದರೂ ಸತ್ಯ. ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿ 24 ತಿಂಗಳುಗಳು ಕಳೆದು ಹೋಗಿವೆ. ಹಾಗಂತ ಕೊಹ್ಲಿ ಬ್ಯಾಟ್ನಿಂದ ರನ್ ಬರಲಿಲ್ಲ ಎಂದಲ್ಲ. ಬದಲಾಗಿ ಶತಕಗಳು ಸಿಡಿದಿಲ್ಲ ಅನ್ನುವುದು ನಿರಾಸೆಯ ವಿಷಯ. ವಿರಾಟ್ ಕೊಹ್ಲಿ ಅಂತಿಮ ಬಾರಿ ಶತಕ ಬಾರಿಸಿದ್ದು 2019ರ ನವೆಂಬರ್ನಲ್ಲಿ. ಅಲ್ಲಿಂದ ಮುಂದೆ ಕೊಹ್ಲಿ ಬ್ಯಾಟ್ನಿಂದ ಇಲ್ಲಿ ತನಕ ಶತಕವೇ ದಾಖಲಾಗಿಲ್ಲ.
ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಡೇ-ನೈಟ್ ಟೆಸ್ಟ್ನಲ್ಲಿ ಕೊಹ್ಲಿ ಶತಕ ಬಾರಿಸಿದ್ದರು. ಕೊಹ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 136 ರನ್ ಗಳಿಸಿದ್ದರು. ಅದೇ ಕೊನೆ, ನಂತರ ಇಂದಿನ ವರೆಗೆ ಕೊಹ್ಲಿ ಮೂರಂಕಿ ಗಡಿ ದಾಟಿಲ್ಲ.
ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 70 ಶತಕಗಳನ್ನು ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 43 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 27 ಶತಕಗಳನ್ನು ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಹಾಗೂ ಟೆಸ್ಟ್ನಲ್ಲಿ 51 ಶತಕಗಳ ನೆರವಿನಿಂದ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 100 ಶತಕ ಸಿಡಿಸಿದ್ದರು. ಸದ್ಯಕ್ಕೆ ಸಚಿನ್ ಟೆಸ್ಟ್ನಲ್ಲಿ ಮಾಡಿರುವ ದಾಖಲೆ ಹಾಗೇ ಉಳಿಯುವ ಎಲ್ಲಾ ಲಕ್ಷಣಗಳಿವೆ.