ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ರುದ್ರತಾಂಡವ ಆಡಲು ಶುರು ಮಾಡಿದೆ. ಒಮಿಕ್ರನ್ ವೈರಸ್ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಇದು ಚಿಂತೆಗೆ ಕಾರಣವಾಗಿದೆ. ಕ್ರಿಕೆಟ್ ಪ್ರವಾಸಗಳು ಕೂಡ ರದ್ದಾಗುವ ಸಾಧ್ಯತೆಗಳು ಎದ್ದು ಕಾಣುತ್ತಿವೆ.
ಟೀಮ್ ಇಂಡಿಯಾ ಡಿಸೆಂಬರ್ 9 ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಹರಿಣಗಳ ನಾಡಲ್ಲಿ ವಿರಾಟ್ಬಳಗ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ಪರಿಸ್ಥಿತಿ ಹದಗೆಟ್ಟಿರುವ ಕಾರಣದಿಂದ ದಕ್ಷಿಣ ಅಫ್ರಿಕಾ ಪ್ರವಾಸ ತೂಗುಯ್ಯಾಲೆಯಲ್ಲಿದೆ. ಅಷ್ಟೇ ಅಲ್ಲ ಒಮಿಕ್ರಾನ್ ಭೀತಿಯಿಂದಾಗಿ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾಗುವ ಸಾಧ್ಯತೆ ಇದೆ.
ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ 24 ದೇಶಗಳಿಗೆ ವ್ಯಾಪಿಸಿದೆ. ಅನೇಕ ದೇಶಗಳು ಆಫ್ರಿಕನ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಿವೆ. ಇದು ವೇಗವಾಗಿ ಹರಡುವ ವೈರಸ್ ಆಗಿರುವುದರಿಂದ ಎಲ್ಲಾ ದೇಶಗಳು ಚುರುಕಿನ ಕಾರ್ಯನಿರ್ವಹಣೆ ಮಾಡುತ್ತಿವೆ. ಬಿಸಿಸಿಐ ಕೂಡ ಆಟಗಾರರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವ ಬಿಸಿಸಿಐ ತಂಡದ ಆಯ್ಕೆಯನ್ನೂ ತಡೆಹಿಡಿದಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕೊರೊನಾ ವೈರಸ್ ಕಳೆದ 2 ವರ್ಷಗಳಿಂದ ಕ್ರಿಕೆಟ್ ವಲಯವನ್ನು ಸಾಕಷ್ಟು ಕಾಡಿದೆ. ಹಲವು ಆಟಗಾರರ ಕ್ರಿಕೆಟ್ ಭವಿಷ್ಯ ಕಳೆದುಹೋಗುವ ಭೀತಿಯಲ್ಲಿದೆ ಅನ್ನುವುದು ಸುಳ್ಳಲ್ಲ.