ಟೀಮ್ ಇಂಡಿಯಾ ಜಗತ್ತಿನ ಬ್ಯೂಸಿ ಕ್ರಿಕೆಟ್ ತಂಡ. ಒಂದರ ಹಿಂದೆ ಒಂದು ಸರಣಿಗಳು ಆಟಗಾರರ ಫಿಟ್ನೆಸ್ ಮತ್ತು ಮಾನಸಿಕ ಸ್ಥಿರತೆಯನ್ನು ಪರೀಕ್ಷೆ ಮಾಡುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಈಗಷ್ಟೇ ಮುಗಿದಿದೆ. ಟೆಸ್ಟ್ ಮತ್ತು ಏಕದಿನ ಸರಣಿ ಸೋಲು ತಂಡಕ್ಕೆ ಆಘಾತ ನೀಡಿದೆ. ಆದರೆ ಅದನ್ನು ಮರೆತು ನಡೆಯಲೇ ಬೇಕಿದೆ. ಯಾಕಂದರೆ ಟೀಮ್ ಇಂಡಿಯಾದ ಮುಂದೆ ಅಷ್ಟು ಸರಣಿಗಳು ಕಾದು ಕುಳಿತಿವೆ.
ಮುಂದಿನ ಜೂನ್ ತನಕ ಟೀಮ್ ಇಂಡಿಯಾ ಆಟಗಾರರು ಸಿಕ್ಕಾ ಪಟ್ಟೆ ಬ್ಯೂಸಿಯಾಗಿದ್ದಾರೆ. ತಪ್ಪುಗಳನ್ನು ತಿದ್ದಿಕೊಳ್ಳುವುದು ಬಿಟ್ಟುಬಿಡಿ, ತಪ್ಪು ಅನ್ನುವುದು ಅರಿವಾಗಲು ಕೂಡ ಸಮಯ ಕಡಿಮೆ ಇದೆ. ಹೀಗಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ತವರಿಗೆ ವಿಮಾನ ಹತ್ತುವಾಗಲೇ ಏನಾಯಿತು ಅನ್ನುವುದನ್ನು ಮರೆಯಬೇಕಿದೆ.
ಭಾರತ- ವೆಸ್ಟ್ ಇಂಡೀಸ್ ಸರಣಿ:
ಟೀಮ್ ಇಂಡಿಯಾ ಭಾರತಕ್ಕೆ ಕಾಲಿಡುತ್ತಿದ್ದಂತೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಯಾರಾಗಬೇಕಿದೆ. ವೆಸ್ಟ್ ಇಂಡೀಸ್ ತಂಡದ ಪ್ರವಾಸ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯಲಿವೆ. ಏಕದಿನ ಪಂದ್ಯ ಅಹ್ಮದಾಬಾದ್ನಲ್ಲಿ ಫೆಬ್ರವರಿ 6, 9 ಮತ್ತು11 ರಂದು ನಡೆದರೆ, ಟಿ20 ಪಂದ್ಯ ಕೊಲ್ಕತ್ತಾದಲ್ಲಿ ಫೆಬ್ರವರಿ 16, 18 ಮತ್ತು 20 ರಂದು ನಡೆಯಲಿದೆ.
ಭಾರತ- ಶ್ರೀಲಂಕಾ ಸರಣಿ:
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮುಗಿಯುತ್ತಲೇ ಶ್ರೀಲಂಕಾ ವಿರುದ್ಧದ ಸರಣಿ ಆರಂಭವಾಗಲಿದೆ. ಟೆಸ್ಟ್ ಮತ್ತು ಟಿ20 ಸರಣಿಗಳು ನಡೆಯಲಿವೆ. ಫೆಬ್ರವರಿ 25 ರಿಂದ ಮಾರ್ಚ್ 9 ರವರೆಗೆ 2 ಟೆಸ್ಟ್ ಪಂದ್ಯಗಳು ನಡೆದರೆ, ಮಾರ್ಚ್ 13 ರಿಂದ 18 ರವರೆಗೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ.
ಭಾರತ- ಅಫ್ಘಾನ್ ಸರಣಿ:
ಅಫ್ಘಾನಿಸ್ತಾನ ವಿರುದ್ಧ ಭಾರತ ಏಕದಿನ ಸರಣಿಯನ್ನು ಆಡಲಿದೆ . ಈ ಸರಣಿಯಲ್ಲಿ3 ಏಕದಿನ ಪಂದ್ಯಗಳು ಇರಲಿವೆ.
ಎರಡೂವರೆ ತಿಂಗಳ ಐಪಿಎಲ್ ಹಬ್ಬ:
ಅಂತರಾಷ್ಟ್ರೀಯ ಸರಣಿಗಳ ಬೆನ್ನಲ್ಲೇ ಐಪಿಎಲ್ ಆಟ ಶುರುವಾಗುತ್ತದೆ. ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಬಹುತೇಕ ಆಟಗಾರರು ಈ ಟೂರ್ನಿಯಲ್ಲಿ ಆಡುವುದು ಖಚಿತ. ಎರಡೂವರೆ ತಿಂಗಳ ಈ ಸರಣಿ ಸಾಕಷ್ಟು ಸವಾಲುಗಳನ್ನು ಒಡ್ಡಲಿದೆ. ಮಾರ್ಚ್ 3ನೇ ವಾರದಿಂದ ಆರಂಭವಾಗುವ ಸರಣಿ ಜೂನ್ ಮೊದಲ ವಾರದ ತನಕ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸರಣಿ:
ಐಪಿಎಲ್ 2022 ರ ನಂತರ ದಕ್ಷಿಣ ಆಫ್ರಿಕಾವು ಭಾರತದೊಂದಿಗೆ 5 T20 ಸರಣಿಗಳನ್ನು ಆಡಬೇಕಾಗಿದೆ.
ಹೀಗೆ ಒಂದರ ಬೆನ್ನ ಹಿಂದೆ ಒಂದರಂತೆ ಸರಣಿಗಳನ್ನು ಆಡುವ ಟೀಮ್ ಇಂಡಿಯಾ, ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣವನ್ನು ನೀಡಲಿದೆ.