ಟಿ20 ವಿಶ್ವಕಪ್ಗೆ (T20 Worldcup) ಸಿದ್ಧತೆ ಮಾಡಿಕೊಳ್ಳುತ್ತಿರುವ ಟೀಮ್ ಇಂಡಿಯಾ (Team India ) ಆಸ್ಟ್ರೇಲಿಯಾದಲ್ಲಿ (Australia) ಮೊದಲ ಗೆಲುವಿನ ಸವಿಯುಂಡಿದೆ. ಅನಧಿಕೃತ ಅಭ್ಯಾಸ ಪಂದ್ಯದಲ್ಲಿ (Practice Match) ಭಾರತ (India), ಪಶ್ಚಿಮ ಆಸ್ಟ್ರೇಲಿಯಾ (Western Australia) ವಿರುದ್ಧ 13 ರನ್ಗಳ ರೋಚಕ ಜಯ ಸಾಧಿಸಿದೆ. ಆಸೀಸ್ ನೆಲದಲ್ಲೂ ಸೂರ್ಯಕುಮಾರ್ ಯಾದವ್ (SuryaKumar yadav) ಪರಾಕ್ರಮ ರೋಹಿತ್ ಬಳಗವನ್ನು ಗೆಲ್ಲಿಸಿದೆ.
ಪರ್ತ್ನಲ್ಲಿ (Perth) ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಬಳಗ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ (3) ಮತ್ತು ರಿಷಬ್ ಪಂತ್ (9) ಬೇಗನೆ ಪವೆಲಿಯನ್ ಸೇರಿಕೊಂಡರು. ದೀಪಕ್ ಹೂಡ ಕೊಡುಗೆ 22 ರನ್. ಹಾರ್ದಿಕ್ 27 ಮತ್ತು ದಿನೇಶ್ ಕಾರ್ತಿಕ್ ಅಜೇಯ 19 ರನ್ಗಳಿಸಿದರು. ಆದರೆ ಬೀಡು ಬೀಸಾಗಿ ಆಡಿದ ಸೂರ್ಯಕುಮಾರ್ ಯಾದವ್ ಪರ್ತ್ನ ಬೌನ್ಸಿ ಟ್ರ್ಯಾಕ್ನಲ್ಲೂ ಮಿಂಚಿನ ಆಟ ಆಡಿದರು. 3 ಫೋರ್, 3 ಸಿಕ್ಸರ್ ಸಿಡಿಸಿದ ಸೂರ್ಯ 35 ಎಸೆತಗಳಲ್ಲಿ 52 ರನ್ ಸಿಡಿಸಿ ಔಟಾದರು. 20 ಓವರುಗಳಲ್ಲಿ ಭಾರತದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 158 ರನ್ ಆಗಿತ್ತು.
ವೆಸ್ಟರ್ನ್ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಭಾರತದ ಬೌಲರ್ಗಳಿಗೆ ಸವಾಲಾಗಿದ್ದರು. ಆದರೆ ಭುವನೇಶ್ವರ್ ಕುಮಾರ್ ಡಾರ್ಸಿ ಶಾರ್ಟ್ ವಿಕೆಟ್ ಕಬಳಿಸಿದರೆ ಅರ್ಶದೀಪ್ ಸಿಂಗ್ ನಿಕ್ ಮ್ಯಾಡಿಸನ್ ಮತ್ತು ಆರೋನ್ ಹಾರ್ಡಿ ವಿಕೆಟ್ ಕಬಳಿಸಿದರು. 22 ರನ್ಗಳಿಸಿದ್ದ ಕೆಮರೂನ್ ಬಾಂಕ್ರಾಫ್ಟ್ ಚಹಲ್ಗೆ ಬಲಿಯಾದರೆ ನಾಯಕ ಆಸ್ಟನ್ ಟರ್ನರ್ ಭುವನೇಶ್ವರ್ಗೆ ವಿಕೆಟ್ ಕೊಟ್ಟರು.
ಸ್ಯಾಮ್ ಫ್ಯಾನಿಂಗ್ ಸವಾಲಾಗಿ ನಿಂತರು. 59 ರನ್ಗಳಿಸಿದ್ದ ಸ್ಯಾಮ್ ವಿಕೆಟ್ ಅರ್ಶದೀಪ್ ಪಾಲಾಗಿತ್ತು. ಡೆತ್ ಓವರುಗಳಲ್ಲಿ ಭಾರತದ ಬೌಲರ್ಗಳು ಪರಿಣಾಮಕಾರಿ ಪ್ರದರ್ಶನ ನೀಡಿದ್ದು ಭಾರತಕ್ಕೆ ನೆಮ್ಮದಿ ತಂದರೂ, ಹರ್ಷಲ್ ಪಟೇಲ್ 49 ರನ್ ಕೊಟ್ಟಿದ್ದು ಚಿಂತೆಗೆ ಕಾರಣವಾಗಿದೆ. ಪಶ್ಚಿಮ ಆಸ್ಟ್ರೇಲಿಯಾ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಮಾತ್ರ ಗಳಿಸಿ 13 ರನ್ಗಳಿಂದ ಸೋತಿತ್ತು. ಭುವನೇಶ್ವರ್ 26 ರನ್ಗಳಿಗೆ 2 ವಿಕೆಟ್ ಪಡೆದರೆ, ಚಹಲ್ 15 ರನ್ಗೆ 2 ವಿಕೆಟ್ ಪಡೆದರು. ಆದರೆ ಅರ್ಶದೀಪ್ 6 ರನ್ಗೆ 3 ವಿಕೆಟ್ ಪಡೆದು ಮಿಂಚಿದರು.