ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದೆ. ಗುಜರಾತ್ ಆಡಿರುವ 10 ಪಂದ್ಯಗಳಲ್ಲಿ 8 ಪಂದ್ಯವನ್ನು ಗೆದ್ದಿದೆ. ಸತತವಾಗಿ ಐದು ಪಂದ್ಯ ಗೆದ್ದಿರುವ ದಾಖಲೆ ಕೂಡ ಗುಜರಾತ್ ಬರೆದಿದೆ. ಮತ್ತೊಂದು ಕಡೆಯಲ್ಲಿ ಮಂಬೈ ಇಂಡಿಯನ್ಸ್ ಸತತ 8 ಪಂದ್ಯಗಳನ್ನು ಸೋತು, 9ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಮುಂಬೈ ತಂಡದ ಬ್ಯಾಟಿಂಗ್ ಸಿಕ್ಕಾಪಟ್ಟೆ ವೈಫಲ್ಯ ಕಂಡಿದೆ. ರೋಹಿತ್ ಶರ್ಮಾ, ಇಶನ್ ಕಿಶನ್ ದೊಡ್ಡ ಇನ್ನಿಂಗ್ಸ್ ಆಡಿ ದಶಕಗಳು ಕಳೆದಂತಾಗಿದೆ. ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಬಗ್ಗೆ ಮಾತ್ರ ಮುಂಬೈ ಹೋಪ್ ಇಟ್ಟುಕೊಂಡಿದೆ. ಟಿಮ್ ಡೇವಿಡ್, ಕೈರಾನ್ ಪೊಲ್ಲಾರ್ಡ್ ಮತ್ತು ಡೇನಿಯಲ್ ಸ್ಯಾಮ್ಸ್ಗೆ ತನ್ನ ಬಲ ತೋರಿಸಲು ಸಮಯ ಬಂದಿದೆ. ಹೃತಿಕ್ ಶೋಕಿನ್ ಕೂಡ ಬ್ಯಾಟಿಂಗ್ ಶಕ್ತಿ ಹೊಂದಿದ್ದಾರೆ.
ಮುಂಬೈ ಬೌಲಿಂಗ್ ಲೈನ್ ಅಪ್ಗೆ ಜಸ್ ಪ್ರಿತ್ ಬುಮ್ರಾ ಕ್ಯಾಪ್ಟನ್. ರಿಲೇ ಮೆರಿಡಿತ್ ಮತ್ತು ಡೇನಿಯಲ್ ಸ್ಯಾಮ್ಸ್ ಮತ್ತಿಬ್ಬರು ಫಾಸ್ಟ್ ಬೌಲರ್ ಗಳು. ಹೃತಿಕ್ ಶೋಕಿನ್ ಮತ್ತು ಕುಮಾರ್ ಕಾರ್ತಿಕೇಯ ಸ್ಪಿನ್ನರ್ ಗಳು. ಪೊಲ್ಲಾರ್ಡ್ ಕೂಡ ಒಂದೆರಡು ಓವರ್ ಬೌಲಿಂಗ್ ಮಾಡಬಲ್ಲರು.
ಗುಜರಾತ್ ಪ್ಲೇ-ಆಫ್ ಸ್ಥಾನ ಖಚಿತವಾಗಿದ್ದರೂ, ಅಗ್ರ ಎರಡು ಸ್ಥಾನದಲ್ಲಿ ಫಿನಿಷ್ ಮಾಡುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಮುಂಬೈ ವಿರುದ್ಧ ಗೆಲ್ಲುವ ಲೆಕ್ಕ ಹಾಕಿದೆ. ಶುಬ್ಮನ್ ಗಿಲ್ ಟಚ್ ಕಳೆದುಕೊಂಡಿದ್ದಾರೆ. ವೃದ್ಧಿಮಾನ್ ಸಾಹಾ ಮತ್ತು ಸಾಯಿ ಸುದರ್ಶನ್ ಮಿಂಚಿನ ಆಟ ಆಡುವ ಸಾಮರ್ಥ್ಯ ಇದೆ ಅನ್ನುವುದನ್ನು ತೋರಿಸಿದ್ದಾರೆ. ಹಾರ್ದಿಕ್ ಪಾಂಡ್ಯಾ, ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೇವಾಟಿಯಾ ಪಂದ್ಯದ ಸ್ಥಿತಿ ಬದಲಿಸಬಲ್ಲರು. ರಶೀದ್ ಖಾನ್ ಕೆಲವೇ ಎಸೆತಗಳಲ್ಲಿ ಫಲಿತಾಂಶ ಬದಲಿಸಿದ್ದಾರೆ. ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ, ಯಶ್ ದಯಾಳ್, ಅಲ್ಜಾರಿ ಜೋಸೆಫ್ ಮತ್ತು ಲೋಕಿ ಫರ್ಗ್ಯೂಸನ್ ವೇಗದ ಬೌಲಿಂಗ್ ಜೊತೆ ರಶೀದ್ ಖಾನ್ ಸ್ಪಿನ್ ಬಲವಿದೆ. ಹಾರ್ದಿಕ್ ಪಾಂಡ್ಯಾ ಮತ್ತು ರಾಹುಲ್ ತೇವಾಟಿಯ ಅವಶ್ಯಕತೆ ಬಿದ್ದರೆ ಬೌಲಿಂಗ್ ಮಾಡಬಲ್ಲರು.
ಬ್ರೆಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಬಿಗ್ ಸ್ಕೋರ್ ನಿರೀಕ್ಷೆ ಇದೆ.ಎರಡೂ ತಂಡಗಳಲ್ಲೂ ಬಿಗ್ ಹಿಟ್ಟರ್ಗಳಿರುವುದರಿಂದ ಬೌಂಡರಿ, ಸಿಕ್ಸರ್ ಗಳ ಲೆಕ್ಕಾಚಾರ ನಡೆಯುತ್ತಿದೆ.