ಕಾಂಗರೂ ನಾಡಿನಲ್ಲಿ ನಡೆಯಲಿರುವ T20 ವಿಶ್ವಕಪ್ ಟೂರ್ನಿಗೆ ಗ್ರ್ಯಾಂಡ್ ಎಂಟ್ರಿಕೊಡಲು ಟೀಂ ಇಂಡಿಯಾ ಸಜ್ಜಾಗಿದೆ. ಈಗಾಗಲೇ ಆಸ್ಟ್ರೇಲಿಯಾ(Australia)ದಲ್ಲಿ ಟಿ20 ವಿಶ್ವಕಪ್ ಜರ್ನಿ ಆರಂಭಿಸಿರುವ ಭಾರತ, ಅಭ್ಯಾಸ ಪಂದ್ಯ(Warm up)ದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆದರೆ ಆಸೀಸ್ ಅಂಗಳದಲ್ಲಿ ʼಹಿಟ್ ಮ್ಯಾನ್ʼ ರೋಹಿತ್ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲದ ಜೊತೆಗೆ ಚಿಂತೆ ಎದುರಾಗಿದೆ.
ಭಾರತದ ಬ್ಯಾಟಿಂಗ್ ಅಸ್ತ್ರವಾಗಿರುವ ರೋಹಿತ್, ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಅಬ್ಬರಿಸಿದ್ದಾರೆ. ಆದರೆ ಮೂರು ಮಾದರಿ ಕ್ರಿಕೆಟ್‌ನಲ್ಲೂ ಮಿಂಚಿರುವ ಹಿಟ್ ಮ್ಯಾನ್, ಆಸ್ಟ್ರೇಲಿಯಾದಲ್ಲಿ ನಿರೀಕ್ಷಿತ ಸಕ್ಸಸ್ ಪಡೆಯದಿರುವುದು ಇದೀಗ ಟೀಂ ಇಂಡಿಯಾಕ್ಕೆ ತಲೆನೋವಾಗಿದೆ. ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ, ಆಸೀಸ್ ನೆಲದಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ.
ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮ, ಈವರೆಗೂ 9 T20I ಪಂದ್ಯಗಳನ್ನ ಆಡಿದ್ದು, ಇದರಲ್ಲಿ 25.85ರ ಸರಾಸರಿಯಲ್ಲಿ ಕೇವಲ 181 ರನ್‌ಗಳನ್ನು ಮಾತ್ರ ಕಲೆಹಾಕಿದ್ದಾರೆ. ಈ ಹಿಂದೆ 2018ರಲ್ಲಿ ಭಾರತ ಆಸೀಸ್ ಪ್ರವಾಸ ಕೈಗೊಂಡಿದ್ದ ವೇಳೆ ರೋಹಿತ್, ಆಡಿದ ಮೂರು ಟಿ20 ಪಂದ್ಯಗಳಲ್ಲಿ 15ರ ಸರಾಸರಿಯಲ್ಲಿ ಕೇವಲ 30 ರನ್‌ಗಳಿಸಿದ್ದರು. 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಂಸಿಜಿಯಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ, 60 ರನ್‌ಗಳಿಸಿದ್ದರು. ಇದೇ ತಿಂಗಳಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್, 52 ರನ್‌ಗಳಿಸಿ ಮತ್ತೊಂದು ಅರ್ಧಶತಕ ದಾಖಲಿಸಿದ್ದರು.
ಈ ಎರಡು ಅರ್ಧಶತಕ ಹೊರತುಪಡಿಸಿ ರೋಹಿತ್ ಶರ್ಮ, 13.80ರ ಸರಾಸರಿಯಲ್ಲಿ 69 ರನ್‌ಗಳನ್ನು ಮಾತ್ರವೇ ಕಲೆಹಾಕಿದ್ದಾರೆ. ಈ ಎಲ್ಲಾ ಏಳು-ಬೀಳುಗಳ ನಡುವೆ ರೋಹಿತ್ ಶರ್ಮ, ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ, ಅ.23ರಂದು ಪಾಕಿಸ್ತಾನದ ವಿರುದ್ಧ ಹೈ-ವೋಲ್ಟೇಜ್ ಪಂದ್ಯವಾಡಲಿದೆ. ಆಸೀಸ್ ನೆಲದಲ್ಲಿ ದೊಡ್ಡ ಸಕ್ಸಸ್ ಕಾಣದ ಹಿಟ್ ಮ್ಯಾನ್ T20Iನಲ್ಲಿ ಮೂರನೇ ಅರ್ಧಶತಕ ಸಿಡಿಸುವ ಜೊತೆಗೆ ಟೀಂ ಇಂಡಿಯಾಕ್ಕೆ ಜಯದ ಹಾದಿಯಲ್ಲಿ ಕರೆದೊಯ್ಯುತ್ತಾರಾ? ಎಂಬ ಕುತೂಹಲ ಮೂಡಿದೆ.