T20I ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಕೌಂಟ್ಡೌನ್ ಶುರುವಾಗಿದ್ದು, ಎಲ್ಲಾ ತಂಡಗಳು ತಮ್ಮದೇ ರಣತಂತ್ರದಿಂದ ಚುಟುಕು ಕ್ರಿಕೆಟ್ ಮಹಾಸಮರದ ಹಣಾಹಣಿಗೆ ಸಜ್ಜಾಗಿವೆ. ಇದರ ಜೊತೆಗೆ ಹಲವು ಮಾಜಿ ಕ್ರಿಕೆಟಿಗರು ಸಹ ತಮ್ಮದೇ ಲೆಕ್ಕಾಚಾರದಲ್ಲಿ T20 ವಿಶ್ವಕಪ್ ಕುರಿತು ಭವಿಷ್ಯ ಹೇಳುತ್ತಿದ್ದಾರೆ.
ಅದರಂತೆ ಪಾಕಿಸ್ತಾನ(Pakistan)ದ ಲೆಜೆಂಡರಿ ವೇಗದ ಬೌಲರ್(Legendary fast bowler) ವಾಸಿಂ ಅಕ್ರಮ್(Wasim Akram) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಎಂಟ್ರಿಕೊಡುವ ಮೂರು ತಂಡಗಳನ್ನ ಹೆಸರಿಸಿದ್ದಾರೆ. ಪ್ರಮುಖವಾಗಿ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ನಲ್ಲಿ ಆಡಲಿವೆ ಎಂದು ಬೆಂಬಲಿಸಿದ್ದಾರೆ. ಅಲ್ಲದೇ ಸೌತ್ ಆಫ್ರಿಕಾ ತಂಡವನ್ನ T20 ವಿಶ್ವಕಪ್ನ ಬ್ಲ್ಯಾಕ್ ಹಾರ್ಸ್ ಎಂದು ಗುರುತಿಸಿದ್ದಾರೆ. ಈ ಬಗ್ಗೆ ದುಬೈನಲ್ಲಿ ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ವಾಸಿಂ ಅಕ್ರಮ್, ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ನಾನು ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ನೋಡಲು ಬಯಸುತ್ತೇನೆ. ಆದರೆ ಸೌತ್ ಫ್ರಿಕಾವು ʼಡಾರ್ಕ್ ಹಾರ್ಸ್ʼ ಆಗಬಹುದು ಎಂದಿದ್ದಾರೆ.
ರೋಹಿತ್ ಶರ್ಮ ನಾಯಕತ್ವದ ಭಾರತ ಪ್ರಸ್ತುತ T20I ಕ್ರಿಕೆಟ್ನಲ್ಲಿ ಅಗ್ರ ಶ್ರೇಯಾಂಕದ ತಂಡವಾಗಿದೆ. ಇತ್ತೀಚೆಗೆ ಪ್ರಸಕ್ತ ವರ್ಷದಲ್ಲಿ ಹೆಚ್ಚು T20I ಪಂದ್ಯಗಳನ್ನು ಗೆದ್ದ ಪಾಕಿಸ್ತಾನದ ದಾಖಲೆಯನ್ನು ಸಹ ಮುರಿದಿದೆ. ಅಲ್ಲದೇ ಸೌತ್ ಆಫ್ರಿಕಾ ವಿರುದ್ಧ ODI ಸರಣಿ ಗೆಲ್ಲುವ ಮೂಲಕ ಪ್ರಸಕ್ತ ವರ್ಷದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಆಸ್ಟ್ರೇಲಿಯಾದ ದಾಖಲೆಯನ್ನು ಸಹ ಟೀಂ ಇಂಡಿಯಾ ಬ್ರೇಕ್ ಮಾಡಿದೆ.
ಆದರೆ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟಿ20 ಸರಣಿ ಆಡುತ್ತಿರುವ ಆಸ್ಟ್ರೇಲಿಯಾ, 3 ಪಂದ್ಯಗಳ ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿದೆ. ಆ ಮೂಲಕ ಆರನ್ ಫಿಂಚ್ ನಾಯಕತ್ವದ ಆಸೀಸ್ ಇನ್ನೂ ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಸೋಲನುಭವಿಸಿದೆ. ಮತ್ತೊಂದೆಡೆ, ಪ್ರಸ್ತುತ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ತ್ರಿಕೋನ T20 ಸರಣಿಯಲ್ಲಿ ಆಡುತ್ತಿರುವ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಈಗಾಗಲೇ ಸರಣಿಯ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಪಾಕಿಸ್ತಾನ ಇತ್ತೀಚೆಗೆ ಮೊಯಿನ್ ಅಲಿ ನೇತೃತ್ವದ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ T20I ಸರಣಿಯನ್ನು 3-4ರಿಂದ ಸೋಲು ಕಂಡಿತ್ತು.