ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಟೀಂ ಇಂಡಿಯಾ(Team India)ದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್(KL Rahul), ಕಾಂಗರೂ ನಾಡಿನಲ್ಲಿ ಅಬ್ಬರಿಸುತ್ತಲೇ ಇದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಪ್ರಮುಖ ಪಂದ್ಯಗಳು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಈ ನಡುವೆ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಕನ್ನಡಿಗ ಕೆ.ಎಲ್. ರಾಹುಲ್ ಕೂಡ ಭರ್ಜರಿ ಫಾರ್ಮ್ ತೋರಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದ್ದ ರಾಹುಲ್, ಆಸ್ಟ್ರೇಲಿಯಾ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಅಬ್ಬರಿಸಿದ್ದಾರೆ.
ಚುಟುಕು ಕ್ರಿಕೆಟ್ ಮಹಾಸಮರದಲ್ಲಿ ರನ್ ದಾಹವನ್ನ ನೀಗಿಸುವ ತವಕದಲ್ಲಿರುವ ಕೆ.ಎಲ್.ರಾಹುಲ್, ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಪಂದ್ಯದ ಆರಂಭದಿಂದಲೇ ಬಿರುಸಿನ ಆಟವಾಡಿದ ರಾಹುಲ್, 33 ಬಾಲ್ಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 57 ರನ್ಗಳಿಸಿ ಮಿಂಚಿದರು. ಅಲ್ಲದೇ ನಾಯಕ ರೋಹಿತ್ ಶರ್ಮ ಜೊತೆಗೂಡಿ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟದ ಕಾಣಿಕೆ ನೀಡಿ ಹೊರ ನಡೆದರು.
ಇತ್ತೀಚೆಗೆ ನಡೆದ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಎರಡು ಅಭ್ಯಾಸ ಪಂದ್ಯದಲ್ಲೂ ಕನ್ನಡಿಗ ಕೆ.ಎಲ್. ರಾಹುಲ್, ತಮ್ಮ ಬ್ಯಾಟಿಂಗ್ ಮೂಲಕ ಮಿಂಚಿದರು. ಎರಡನೇ ಪಂದ್ಯದಲ್ಲಿ ಕಣಕ್ಕಿಳಿದ ರಾಹುಲ್, 55 ಬಾಲ್ಗಳಲ್ಲಿ 74 ರನ್ಗಳಿಸಿ ಮಿಂಚಿದರು.
ಟೀಂ ಇಂಡಿಯಾ: ರೋಹಿತ್ ಶರ್ಮ(ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ದೀಪಕ್ ಹೂಡ, ರಿಷಬ್ ಪಂತ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್.