ಆಸ್ಟ್ರೇಲಿಯಾ(Australia)ದಲ್ಲಿ ನಡೆಯುವ ಟಿ20 World Cup ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೆವರೆಟ್ ಎನಿಸಿರುವ ಪಾಕಿಸ್ತಾನ(Pakistan), ಕಿವೀಸ್ ಅಂಗಳದಲ್ಲಿ ನಡೆದ ಟಿ20 ತ್ರಿಕೋನ ಸರಣಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಆತ್ಮವಿಶ್ವಾಸದೊಂದಿಗೆ T20I ವಿಶ್ವಕಪ್‌ನತ್ತ ಮುಖಮಾಡಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧ ಫೈನಲ್(Final) ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಪಾಕ್ ಪಡೆ, 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ತ್ರಿಕೋನ ಸರಣಿಯ ಚಾಂಪಿಯನ್‌ಪಟ್ಟಕ್ಕೇರಿತು. ಫೈನಲ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿ಼ಲೆಂಡ್, ಕೇನ್ ವಿಲಿಯಂಸನ್(59) ಅವರ ಜವಾಬ್ದಾರಿಯ ಆಟದಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್‌ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಪಾಕಿಸ್ತಾನ, 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್‌ಗಳಿಸಿ ಗೆಲುವಿನ ದಡಸೇರಿತು.

ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಫಿನ್ ಅಲೆನ್(12) ಹಾಗೂ ಡ್ವೇನ್ ಕಾನ್ವೆ(14) ನಿರೀಕ್ಷಿತ ಆರಂಭ ನೀಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಂಸನ್(59) ಅತ್ಯಂತ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್(29), ಮಾರ್ಕ್ ಚಾಂಪ್ಮನ್(25) ಹಾಗೂ ಜಿಮ್ಮಿ ನೀಶಮ್(17) ಉಪಯುಕ್ತ ಕಾಣಿಕೆ ನೀಡಿದರು. ಪಾಕ್ ಪರ ನಸೀಮ್ ಶಾ ಹಾಗೂ ಹ್ಯಾರಿಸ್ ರಾಫ್ ತಲಾ 2 ವಿಕೆಟ್ ಪಡೆದರೆ. ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ತಲಾ 1 ವಿಕೆಟ್ ಪಡೆದುಕೊಂಡರು.
ಕಿವೀಸ್ ನೀಡಿದ 164 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಪಾಕಿಸ್ತಾನ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್ ಆಜಂ(15) ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ. ನಂತರ ಬಂದ ಮಸೂದ್(19) ರನ್‌ಗಳಿಗೆ ಔಟಾದರು. ಆದರೆ ಜವಾಬ್ದಾರಿಯುತ ಆಟವಾಡಿದ ಮೊಹಮ್ಮದ್ ರಿಜ್ವಾನ್(34), ಮೊಹಮ್ಮದ್ ನವಾಜ್(38*) ಹಾಗೂ ಹೈದರ್ ಅಲಿ(31) ರನ್‌ಗಳಿಸಿ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕಾರ್ ಅಹ್ಮೆದ್(25*) ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನ ಗೆಲುವಿನ ದಡಸೇರಿಸಿದರು. ಕಿವಿಸ್ ಪರ ಬ್ರೇಸ್ವೆಲ್ 2 ವಿಕೆಟ್ ಪಡೆದರೆ, ಸೌಥಿ, ಟಿಕ್ನರ್ ಹಾಗೂ ಸೋಧಿ ತಲಾ 1 ವಿಕೆಟ್ ಪಡೆದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ ಕಾರಣವಾದ ಮೊಹಮ್ಮದ್ ನವಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಸರಣಿಯಲ್ಲಿ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಮೈಕಲ್ ಬ್ರೇಸ್ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.