ಸೈಯದ್ ಮುಷ್ತಾಕ್ ಅಲಿ(Syed Mushtaq Ali) ಟ್ರೋಫಿಯಲ್ಲಿ ಅಸ್ಸಾಂ(Assam) ಬೌಲರ್‌ಗಳನ್ನ ಧೂಳಿಪಟ ಮಾಡಿದ ಮುಂಬೈ ತಂಡದ ನಾಯಕ(Mumbai captain) ಪೃಥ್ವಿ ಶಾ(Prithvi Shaw) 134 ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(Saurashtra Cricket Association) ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಅವಕಾಶ ಪಡೆಯಿತು. ಇದರ ಸಂಪೂರ್ಣ ಲಾಭ ಪಡೆದ ಮುಂಬೈ, 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 230 ರನ್‌ಗಳ ಬೃಹತ್ ಮೊತ್ತಗಳಿಸಿದೆ. ಮುಂಬೈ ಪರ ನಾಯಕ ಪೃಥ್ವಿ ಶಾ, 134 ರನ್‌ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ, ಇನ್ನಿಂಗ್ಸ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮೊರೆ ಹೋದರು. ಅಸ್ಸಾಂ ಬೌಲಿಂಗ್ ದಾಳಿಯನ್ನ ಮನಬಂದಂತೆ ದಂಡಿಸಿದ ಯುವ ಬ್ಯಾಟ್ಸಮನ್, ಕೇವಲ 19 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ್ದರು. ನಂತರವೂ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಪೃಥ್ವಿ, 46 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಆ ಮೂಲಕ ಮುಂಬೈ ತಂಡದ ನಾಯಕ ಅತ್ಯಂತ ವಿಶೇಷ ರೀತಿಯಲ್ಲಿ ತಮ್ಮ ಚೊಚ್ಚಲ ಟಿ20 ಶತಕಗಳಿಸಿದರು. ಅಂತಿಮವಾಗಿ ಪೃಥ್ವಿ ಶಾ, 61 ಎಸೆತಗಳಲ್ಲಿ 134 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಶಾ ಅವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು 13 ಬೌಂಡರಿ ಒಳಗೊಂಡಿತ್ತು.
ಪೃಥ್ವಿ ಶಾ ದಾಖಲಿಸಿದ ಶತಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿ ದಾಖಲಾದ 8ನೇ ವೇಗದ ಅರ್ಧಶತಕವಾಗಿದೆ. ಇನ್ನೂ ಈ ಹಿಂದೆ 2018ರಲ್ಲಿ ದೆಹಲಿ ಪರ ಆಡುತ್ತಿದ್ದ ರಿಷಬ್ ಪಂತ್, ಹಿಮಾಚಲ ಪ್ರದೇಶ ವಿರುದ್ಧ 34 ಎಸೆತಗಳಲ್ಲಿ ಶತಕ ಬಾರಿಸಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿ T20 ಪಂದ್ಯಾವಳಿಯ ಇತಿಹಾಸದಲ್ಲಿ ದಾಖಲಾದ ವೇಗದ ಶತಕವಾಗಿದೆ.