ಪಾಕಿಸ್ತಾನ(Pakistan)ದ ವಿರುದ್ಧ ಸಂಘಟಿತ ಪ್ರದರ್ಶನ ನೀಡಿದ ನ್ಯೂಜಿ಼ಲೆಂಡ್(New Zealand) T20I ತ್ರಿಕೋನ ಸರಣಿಯಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ ಅಜೇಯವಾಗಿ ಉಳಿದಿದ್ದ ಪಾಕಿಸ್ತಾನ ಮೊದಲ ಸೋಲು ಕಂಡಿತು.
ಕ್ರೈಸ್ಟ್‌ಚರ್ಚ್(Christchurch)ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಬ್ಯಾಟ್ಸ್‌ಮನ್‌ಗಳ ನೀರಸ ಪ್ರದರ್ಶನದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 130 ರನ್‌ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಕಿವೀಸ್, 16.1 ಓವರ್‌ಗಳಲ್ಲಿ 131 ರನ್‌ಗಳಿಸುವ ಮೂಲಕ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ನ್ಯೂಜಿ಼ಲೆಂಡ್ ಆಡಿರುವ ಮೂರು ಪಂದ್ಯದಲ್ಲಿ 2 ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಇನ್ನಿಂಗ್ಸ್ ಆರಂಭಿಸಿದ ಮೊಹಮ್ಮದ್ ರಿಜ್ವಾನ್(16) ಹಾಗೂ ನಾಯಕ ಬಾಬರ್ ಅಜಮ್(21) ಉತ್ತಮ ಆರಂಭ ನೀಡಿದರು. ಕೇವಲ 4 ಓವರ್‌ಗಳಲ್ಲಿ ಆರಂಭಿಕ ಜೊತೆಯಾಟಕ್ಕೆ 30 ರನ್ ಸೇರಿಸಿದರು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಬ್ರೇಸ್‌ವೆಲ್(Michael Bracewell), ಇಬ್ಬರು ಆರಂಭಿಕರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು.
ಮೊದಲ ಕ್ರಮಾಂಕದಲ್ಲಿ ಬಂದ ಶಾನ್ ಮಸೂದ್ 12 ಎಸೆತಗಳಲ್ಲಿ 14 ರನ್‌ಗಳಿಸಿ, ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕರ್ ಅಹ್ಮದ್ (27) ಮತ್ತು ಆಸಿಫ್ ಅಲಿ (25) ಜವಾಬ್ದಾರಿಯುತ ಆಟವಾಡಿದರು. ಉಳಿದಂತೆ ಯಾವುದೇ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಪಾಕಿಸ್ತಾನ 130 ರನ್‌ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಪರ ಬ್ರೇಸ್‌ವೆಲ್ 2/11, ಸ್ಯಾಂಟ್ನರ್ 2/27 ಹಾಗೂ ಟಿಮ್ ಸೌಧಿ 2/31 ವಿಕೆಟ್ ಪಡೆದರು.
ಪಾಕಿಸ್ತಾನ ನೀಡಿದ 131 ರನ್‌ಗಳ ಸಾಧಾರಣ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿ಼ಲೆಂಡ್ ಪರ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ 117 ರನ್‌ಗಳ ಆರಂಭಿಕ ಜೊತೆಯಾಟವಾಡಿದರು. ಅಲೆನ್ 32 ಎಸೆತಗಳಲ್ಲಿ ಅರ್ಧ ಶತಕ ಸೇರಿದಂತೆ 62 ರನ್‌ಗಳಿಸಿದರೆ. ಕಾನ್ವೆ(ಅಜೇಯ 49)ರನ್‌ಗಳಿಸಿದರು. ಇವರಿಬ್ಬರ ಉತ್ತಮ ಆಟದಿಂದ ನ್ಯೂಜಿಲೆಂಡ್ 16.1 ಓವರ್‌ಗಳಲ್ಲಿ 131 ರನ್‌ಗಳಿಸಿ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮೂರು ಪಂದ್ಯಗಳಿಂದ ತಲಾ ಎರಡು ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲದಲ್ಲಿದ್ದು, ಬಾಂಗ್ಲಾದೇಶ ತನ್ನ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಸರಣಿಯ ಮುಂದಿನ ಪಂದ್ಯ ಗುರುವಾರ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ.
T20I Tri Series Pakistan New Zealand Michael Bracewell Sports Karnataka