ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ವ್ಯಾನ್ ದರ್ ದುಸೇನ್(75*) ಹಾಗೂ ಡೇವಿಡ್ ಮಿಲ್ಲರ್(64*) ಅಜೇಯ 131 ರನ್ಗಳ ಜೊತೆಯಾಟದ ನೆರವಿನಿಂದ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ T20Iನಲ್ಲಿ ದಾಖಲೆಯ ಚೇಸಿಂಗ್ನಿಂದ ಗೆದ್ದುಬೀಗಿತು.
ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು. ಭಾರತದ ಬ್ಯಾಟ್ಸ್ಮನ್ಗಳ ಅದ್ಭುತ ಪ್ರದರ್ಶನದಿಂದ 20 ಓವರ್ಗಳಲ್ಲಿ 4 ವಿಕೆಟ್ಗೆ 211 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾ 19.1 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಕಿಶಾನ್ ಬೊಂಬಾಟ್ ಆಟ:
ಮೊದಲು ಬ್ಯಾಟ್ ಮಾಡಿದ ಭಾರತ ಸಂಘಟಿತ ಬ್ಯಾಟಿಂಗ್ ಪ್ರದರ್ಶಿಸಿತು. ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ 76 ರನ್(48 ಬಾಲ್, 11 ಬೌಂಡರಿ, 3 ಸಿಕ್ಸ್) ಅದ್ಭುತ ಆಟವಾಡಿದರು. ಇವರೊಂದಿಗೆ ಆರಂಭಿಕನಾಗಿ ಬಂದ ಋತುರಾಜ್ ಗಾಯಕ್ವಾಡ್(23) ರನ್ಗಳಿಸಿ ಹೊರ ನಡೆದರು. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್(36) ಹಾಗೂ ನಾಯಕ ರಿಷಬ್ ಪಂತ್(29) ಉಪಯುಕ್ತ ರನ್ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ(31*) ಬಿರುಸಿನ ಆಟವಾಡಿದ ಪರಿಣಾಮ ಭಾರತ 211 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಸೌತ್ ಆಫ್ರಿಕಾ ಪರ ಮಹಾರಾಜ್, ನೋಕಿಯೇ, ಪರ್ನೇಲ್ ಹಾಗೂ ಪ್ರಿಟೋರಿಯಸ್ ತಲಾ 1 ವಿಕೆಟ್ ಪಡೆದರು.
ದುಸೇನ್-ಮಿಲ್ಲರ್ ಆರ್ಭಟ:
ಭಾರತ ನೀಡಿದ 212 ರನ್ಗಳ ಕಠಿಣ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿಕಾಕ್(22) ಹಾಗೂ ನಾಯಕ ತೆಂಬಾ ಬವುಮಾ(10) ಬಹುಬೇಗನೆ ನಿರ್ಗಮಿಸಿದರು. ನಂತರ ಬಂದ ಡ್ವೇನ್ ಪ್ರಿಟೋರಿಯಸ್(29) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ 4ನೇ ವಿಕೆಟ್ಗೆ ಜೊತೆಯಾದ ವ್ಯಾನ್ ದರ್ ದುಸೇನ್ 75* ರನ್(46 ಬಾಲ್, 7 ಬೌಂಡರಿ, 5 ಸಿಕ್ಸ್) ಹಾಗೂ ಡೇವಿಡ್ ಮಿಲ್ಲರ್ 64* ರನ್(31 ಬಾಲ್, 4 ಬೌಂಡರಿ, 5 ಸಿಕ್ಸ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ ಅಜೇಯ 131 ರನ್ಗಳ ಜೊತೆಯಾಟದ ಮೂಲಕ ತಂಡವನ್ನ ಗೆಲುವಿನ ದಡಸೇರಿಸಿದರು. ಭಾರತದ ಪರ ಭುವನೇಶ್ವರ್, ಅಕ್ಸರ್ ಹಾಗೂ ಹರ್ಷಲ್ ತಲಾ 1 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಜೂ.12ರಂದು ಭಾನುವಾರ ಕಟಕ್ನಲ್ಲಿ ಸಂಜೆ 7ಕ್ಕೆ ನಡೆಯಲಿದೆ.