ಟೀಂ ಇಂಡಿಯಾ(Team India)ದ “ರನ್ ಮಷಿನ್” ವಿರಾಟ್ ಕೊಹ್ಲಿ(Virat Kohli) ತಾನೊಬ್ಬ ಬಿಗ್ ಟೂರ್ನಮೆಂಟ್ ಪ್ಲೇಯರ್ ಅನ್ನೋದನ್ನ ಮತ್ತೆ ತೋರಿಸಿಕೊಟ್ಟಿದ್ದಾರೆ. 2022ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಮಿಂಚಿದ ‘ಕಿಂಗ್ ಕೊಹ್ಲಿ’ ಮತ್ತೊಂದು ಯಶಸ್ವಿ ಟಿ20 ವಿಶ್ವಕಪ್ ಜರ್ನಿ ಮುಗಿಸಿದ್ದಾರೆ.
ಭಾರತದ ಬ್ಯಾಟಿಂಗ್ ಶಕ್ತಿಯಾಗಿರುವ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತದ ಬೆನ್ನೆಲುಬು ಎಂಬುದನ್ನ ತೋರಿಸಿದ್ದಾರೆ. 2012ರಲ್ಲಿ ಭಾರತದ ಪರ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡ ʼಚೇಸ್ ಮಾಸ್ಟರ್ʼ ರನ್ ಹೊಳೆಯನ್ನೇ ಹರಿಸಿದ್ದಾರೆ. 2012ರಿಂದ ಈವರೆಗೆ ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ 27 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 1141 ರನ್ಗಳಿಸಿದ್ದಾರೆ.
2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 319 ರನ್ಗಳಿಸಿದ್ದ ವಿರಾಟ್ ಕೊಹ್ಲಿ, ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. 2016ರ T20 ವಿಶ್ವಕಪ್ನಲ್ಲೂ ತಮ್ಮ ಯಶಸ್ವಿ ಫಾರ್ಮ್ ಮುಂದುವರಿಸಿದ ವಿರಾಟ್, ಪಂದ್ಯಾವಳಿಯಲ್ಲಿ 273 ರನ್ಗಳಿಸಿದ್ದರು. ಇದೀಗ ಮತ್ತೊಮ್ಮೆ ಅಬ್ಬರಿಸಿರುವ ಕೊಹ್ಲಿ, ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟ್ಸ್ಮನ್ಗಳಲ್ಲಿ ಸದ್ಯ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಟೂರ್ನಿಯಲ್ಲಿ ನಾಲ್ಕು ಅರ್ಧಶತಕಗಳ ನೆರವಿನಿಂದೊಗೆ 296 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ, ಬಹುತೇಕ ಮೊದಲ ಸ್ಥಾನವನ್ನ ತಮ್ಮದಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇಡೀ ಪಂದ್ಯಾವಳಿಯಲ್ಲಿ ಎದುರಾಳಿ ಬೌಲರ್ಗಳ ಬೆವರಿಳಿಸಿದ್ದ ಕೊಹ್ಲಿ, 98.66 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.