ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಭರ್ಜರಿ ಯಶಸ್ಸು ಕಂಡಿದ್ದು, ಫೈನಲ್ ಹೊಸ್ತಿಲಿಗೆ ಬಂದಿರುವ ಪಾಕ್ ತಂಡದ ಯಶಸ್ಸಿನಲ್ಲಿ ಶದಾಬ್ ಖಾನ್(Shadab Khan) ಪ್ರಮುಖ ಪಾತ್ರವಹಿಸಿದ್ದಾರೆ.
ಟೂರ್ನಿಯಲ್ಲಿ ಆಡಿರುವ 16 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಶದಾಬ್ ಖಾನ್, 6.59ರ ಎಕಾನಮಿಯಲ್ಲಿ 10 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ. ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಶದಾಬ್, ಇತ್ತೀಚಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆಯುವ ಮೂಲಕ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ ದಾಖಲೆಯನ್ನ ಸರಿಗಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೊಂದು ರೆಕಾರ್ಡ್ ಮೇಲೆ ಶದಾಬ್ ಖಾನ್ ಕಣ್ಣಿಟ್ಟಿದ್ದಾರೆ.
ಅತ್ಯುತ್ತಮ ಫಾರ್ಮ್ನಲ್ಲಿರುವ ಬೌಲಿಂಗ್ ಆಲ್ರೌಂಡರ್ ಶದಾಬ್ ಖಾನ್, ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳ ಮೈಲುಗಲ್ಲು ದಾಟಲು ಕೇವಲ 3 ವಿಕೆಟ್ಗಳ ಅಗತ್ಯವಿದ್ದು, ಇಂಗ್ಲೆಂಡ್ ವಿರುದ್ಧದ ಟಿ20 ಫೈನಲ್ನಲ್ಲಿ ಶದಾಬ್ 3 ವಿಕೆಟ್ ಪಡೆದರೆ ಈ ಸಾಧನೆ ಮಾಡಿದ ಪಾಕಿಸ್ತಾನ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಈವರೆಗೂ 83 ಪಂದ್ಯಗಳನ್ನು ಆಡಿರುವ ಶದಾಬ್ ಖಾನ್, 7.06ರ ಎಕಾನಮಿಯೊಂದಿಗೆ 97 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ಬೌಲಿಂಗ್ ಆಲ್ರೌಂಡರ್ಗೆ ಟಿ20 ವಿಶ್ವಕಪ್ ಫೈನಲ್ನಲ್ಲಿ 100 ವಿಕೆಟ್ಗಳ ಮೈಲುಗಲ್ಲು ತಲುಪುವ ಎಲ್ಲಾ ಅವಕಾಶಗಳಿದ್ದು, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶದಾಬ್ ಈ ಸಾಧನೆ ಮಾಡುತ್ತಾರಾ? ಎಂದು ಕಾದುನೋಡಬೇಕಿದೆ.