ಆಸ್ಟ್ರೇಲಿಯಾ(Australia)ದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್(Finals) ಪಂದ್ಯಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಇಂಟರ್ ನ್ಯಾಷಿನಲ್ ಕ್ರಿಕೆಟ್ ಕೌನ್ಸಿಲ್(ICC) ಸರಣಿ ಶ್ರೇಷ್ಠ(Player of Tournament) ಪ್ರಶಸ್ತಿಗೆ ಒಂಭತ್ತು ಮಂದಿ ಆಟಗಾರರನ್ನ ಹೆಸರಿಸಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಒಂಭತ್ತು ಆಟಗಾರರ ಹೆಸರುಗಳನ್ನು ಐಸಿಸಿ ಪ್ರಕಟಿಸಿದೆ. ಅದರಂತೆ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೀಲಂಕಾದ ವನಿಂದು ಹಸರಂಗ, ಪಾಕಿಸ್ತಾನದ ಶದಾಬ್ ಖಾನ್, ಶಾಹಿನ್ ಅಫ್ರಿದಿ, ಇಂಗ್ಲೆಂಡ್ನ ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಅಲೆಕ್ಸ್ ಹೇಲ್ಸ್ ಹಾಗೂ ಜಿಂಬಾಬ್ವೆ ತಂಡದ ಆಲ್ರೌಂಡರ್ ಸಿಕಂದರ್ ರಾಜಾ಼ ಅವರುಗಳ ಹೆಸರನ್ನು ಐಸಿಸಿ ಪ್ರಕಟಿಸಿದೆ.
ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಪ್ರಶಸ್ತಿ ರೇಸ್ನಿಂದ ಹೊರಬಿದ್ದಿದೆ. ಆದರೆ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ನಿಂದ ಮಿಂಚಿದ್ದರು. ಸೆಮೀಸ್ನಲ್ಲಿ ಭಾರತದ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಲೆಕ್ಸ್ ಹೇಲ್ಸ್, ತಂಡದ ಗೆಲುವಿಗೆ ಮುಖ್ಯ ಕಾರಣವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2022ರಲ್ಲಿ ನಡೆದ ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿರುವ ಜಿಂಬಾಬ್ವೆಯ ಆಲ್ರೌಂಡರ್ ಸಿಕಂದರ್ ರಾಜಾ಼, ತಂಡದ ಪ್ರಮುಖ ಅಸ್ತ್ರವಾಗಿದ್ದರು. ಪ್ರಸಕ್ತ ವಿಶ್ವಕಪ್ನಲ್ಲಿ ಮೂರು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಿಕಂದರ್ ರಾಜಾ಼, ತಂಡದ ಯಶಸ್ಸಿಗೆ ಮುಖ್ಯ ಕಾರಣವಾಗಿದ್ದರು.
ಇವರ ಜೊತೆಗೆ ಶ್ರೀಲಂಕಾದ ವನಿಂದು ಹಸರಂಗ ಸಹ ಸರಣಿ ಶ್ರೇಷ್ಠ ಪ್ರಶಸ್ತಿ ರೇಸ್ನಲ್ಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಎಂಟು ಪಂದ್ಯಗಳಲ್ಲಿ 6.41ರ ಎಕಾನಮಿ ಮೂಲಕ 15 ವಿಕೆಟ್ ಪಡೆದಿರುವ ಹಸರಂಗ, ಅತ್ಯಧಿಕ ವಿಕೆಟ್ ಪಡೆದ ಪ್ರಮುಖ ಬೌಲರ್ ಎನಿಸಿದ್ದಾರೆ. ಇನ್ನು ಇಂಗ್ಲೆಂಡ್ ವೇಗಿ ಸ್ಯಾಮ್ ಕರ್ರನ್ ಸಹ ಉತ್ತಮ ಪ್ರದರ್ಶನ ನೀಡಿದ್ದು, ಅಫ್ಘಾನಿಸ್ತಾನದ ವಿರುದ್ಧ 5 ವಿಕೆಟ್ ಪಡೆದು ಅಬ್ಬರಿಸಿದ್ದರು. ಉಳಿದಂತೆ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹಿನ್ ಅಫ್ರಿದಿ, ಶದಾಬ್ ಖಾನ್ ಸಹ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
=================