T20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ(Team India)ದ ಗೆಲುವು ಕಸಿದ ಇಂಗ್ಲೆಂಡ್(England)ನ ಆರಂಭಿಕ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್(Alex Hales) 10 ವರ್ಷಗಳ ಹಿಂದಿನ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಲೆಕ್ಸ್ ಹೇಲ್ಸ್, ಭಾರತದ ವಿರುದ್ಧ ಇಂಗ್ಲೆಂಡ್ಗೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಮೈದಾನದ ತುಂಬೆಲ್ಲಾ ಬೌಂಡರಿ, ಸಿಕ್ಸರ್ ಸಿಡಿಸಿದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್, ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಕೇವಲ 47 ಬಾಲ್ಗಳಲ್ಲಿ ಅಜೇಯ 86 ರನ್ಗಳಿಸಿದ ಹೇಲ್ಸ್, ತಂಡಕ್ಕೆ 10 ವಿಕೆಟ್ಗಳ ಭಾರೀ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ತಮ್ಮ ಇನ್ನಿಂಗ್ಸ್ನಲ್ಲಿ 7 ಭರ್ಜರಿ ಸಿಕ್ಸರ್ ಸಿಡಿಸಿದ್ದ ಅಲೆಕ್ಸ್ ಹೇಲ್ಸ್ ಆ ಮೂಲಕ ಟಿ20 ವಿಶ್ವಕಪ್ನ ನಾಕೌಟ್ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆದರು. ಈ ಹಿಂದೆ ಆರು ಸಿಕ್ಸರ್ ಸಿಡಿಸಿದ್ದು, ದಾಖಲೆಯಾಗಿತ್ತು. ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕ್ ಹಸ್ಸಿ ಹಾಗೂ ವಿಂಡೀಸ್ನ ಮಾರ್ಲನ್ ಸ್ಯಾಮ್ಯೂಲ್ಸ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದರು.
2010ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮೈಕ್ ಹಸ್ಸಿ, ಪಾಕಿಸ್ತಾನದ ವಿರುದ್ಧದ ನಾಕೌಟ್ ಪಂದ್ಯದಲ್ಲಿ 6 ಸಿಕ್ಸ್ ಬಾರಿಸಿದ್ದರು. ಇದಾದ ಬಳಿಕ 2012ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ʼಯೂನಿವರ್ಸ್ ಬಾಸ್ʼ ಕ್ರಿಸ್ ಗೇಯ್ಲ್, ಆಸ್ಟ್ರೇಲಿಯಾದ ವಿರುದ್ಧ 6 ಸಿಕ್ಸರ್ ಬಾರಿಸಿ, ಮೈಕ್ ಹಸ್ಸಿ ದಾಖಲೆಯನ್ನ ಸರಿಗಟ್ಟಿದ್ದರು. ಇದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಮತ್ತೋರ್ವ ಆಟಗಾರ ಮಾರ್ಲನ್ ಸೆಮ್ಯುಲ್ಸ್ ಸಹ ಆರು ಸಿಕ್ಸ್ಗಳನ್ನ ಬಾರಿಸಿದ್ದರು. ಆದರೆ ಪ್ರಸ್ತುತ ಟಿ20 ವಿಶ್ವಕಪ್ನ ಸೆಮೀಸ್ನಲ್ಲಿ ಇಂಗ್ಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್, 7 ಸಿಕ್ಸ್ಗಳನ್ನು ಬಾರಿಸುವ ಮೂಲಕ ಈ ಹಿಂದಿನ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.