ಸಂಘಟಿತ ಪ್ರದರ್ಶನದ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್(England) ಹಾಗೂ ಪಾಕಿಸ್ತಾನ(Pakistan) ಅಂತಿಮ ಹಣಾಹಣಿಗಾಗಿ ಸಜ್ಜಾಗಿವೆ. ಫೈನಲ್ ಪಂದ್ಯಕ್ಕಾಗಿ ರಣತಂತ್ರ ರೂಪಿಸಿರುವ ಎರಡು ತಂಡಗಳು ಆಸ್ಟ್ರೇಲಿಯಾದ ಐತಿಹಾಸಿಕ ಮೆಲ್ಬೋರ್ನ್ ಅಂಗಳದಲ್ಲಿ ಇತಿಹಾಸ ಸೃಷ್ಟಿಸುವ ತವಕದಲ್ಲಿವೆ.
ಚುಟುಕು ಕ್ರಿಕೆಟ್ ಮಹಾಸಮರದ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು, ಮೆಲ್ಬೋರ್ನ್ ಮೈದಾನದಲ್ಲಿ ಈವರೆಗೂ ಆಡಿರುವ T20 ಪಂದ್ಯಗಳಲ್ಲಿ ಗೆಲುವನ್ನೇ ಕಂಡಿಲ್ಲ. ಹೀಗಾಗಿ ನವೆಂಬರ್ 13ರಂದು ನಡೆಯುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯಾರೇ ಗೆದ್ದರೂ ಅದು, ಮೆಲ್ಬೋರ್ನ್‌ನಲ್ಲಿ ದೊರೆಯುವ ಚೊಚ್ಚಲ T20 ಪಂದ್ಯದ ಗೆಲುವಾಗಿ ಇತಿಹಾಸ ಪುಟ ಸೇರಲಿದೆ.
ಜಾಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ 2011ರಿಂದ ಈವರೆಗೂ ಮೆಲ್ಬೋರ್ನ್‌ನಲ್ಲಿ ನಾಲ್ಕು T20 ಪಂದ್ಯಗಳನ್ನಾಡಿದ್ದು, ಆಡಿರುವ ಎಲ್ಲಾ ನಾಲ್ಕು ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದೆ. ಮತ್ತೊಂದೆಡೆ ಬಾಬರ್ ಆಜ಼ಂ ಸಾರಥ್ಯದ ಪಾಕಿಸ್ತಾನ 2011ರಿಂದ ಈವರೆಗೂ ಮೆಲ್ಬೋರ್ನ್‌ನಲ್ಲಿ ಎರಡು T20 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಸಹ ಸೋಲಿನ ಕಹಿ ಅನುಭವಿಸಿದೆ. ಅಲ್ಲದೇ ಪ್ರಸ್ತುತ ನಡೆಯುತ್ತಿರುವ 2022ರ T20 ವಿಶ್ವಕಪ್ ಟೂರ್ನಿಯಲ್ಲೂ ಸಹ ಎರಡು ತಂಡಗಳು ಮೆಲ್ಬೋರ್ನ್‌ನಲ್ಲಿ ಆಡಿರುವ ಪಂದ್ಯಗಳಲ್ಲಿ ಸೋಲು ಕಂಡಿವೆ.
ಸೂಪರ್-12 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ 5 ರನ್‌ಗಳಿಂದ(DLS ನಿಯಮದನ್ವಯ) ಸೋಲು ಕಂಡಿತ್ತು. ಪಾಕಿಸ್ತಾನ ಸಹ ಸೂಪರ್-12 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧದ ಜಿದ್ದಾಜಿದ್ದಿನ ಪಂದ್ಯದಲ್ಲಿ 4 ವಿಕೆಟ್‌ಗಳ ಸೋಲಿನ ಆಘಾತ ಅನುಭವಿಸಿತ್ತು. ಹೀಗಾಗಿ ಮೆಲ್ಬೋರ್ನ್‌ನಲ್ಲಿ ಗೆಲುವನ್ನೇ ಕಂಡಿರದ ಎರಡು ತಂಡಗಳು ಇದೀಗ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನಾಡುತ್ತಿದ್ದು, ಉಭಯ ತಂಡಗಳ ಪೈಕಿ ಯಾರಿಗೆ ಗೆಲುವಿನ ಮಾಲೆ ಲಭಿಸುತ್ತೇ? ಕಾದು ನೋಡಬೇಕಿದೆ.