ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಸಂಘಟಿತ ಪ್ರದರ್ಶನ ನೀಡಿದ ಟೀಂ ಇಂಡಿಯಾ(Team India), ಟಿ20 ವಿಶ್ವಕಪ್(T20 World Cup) ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ರನ್ಗಳ ಅದ್ಭುತ ಗೆಲುವು ಸಾಧಿಸಿದೆ. ಬ್ರಿಸ್ಬೆನ್(Brisbane)ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಕೆ.ಎಲ್. ರಾಹುಲ್(57) ಹಾಗೂ ಸೂರ್ಯಕುಮಾರ್ ಯಾದವ್(50) ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ 20 ಓವರ್ಗಳಲ್ಲಿ 7 ವಿಕೆಟ್ಗೆ 186 ರನ್ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 180ಕ್ಕೆ ಆಲೌಟ್ ಆಗುವ ಮೂಲಕ ಸೋಲಿನ ನಿರಾಸೆ ಅನುಭವಿಸಿತು.
ರಾಹುಲ್-ಸೂರ್ಯ ಮಿಂಚು:
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್(57) ಹಾಗೂ ನಾಯಕ ರೋಹಿತ್ ಶರ್ಮ(15) ಮೊದಲ ವಿಕೆಟ್ಗೆ 78 ರನ್ಗಳ ಉತ್ತಮ ಮೊತ್ತ ಕಲೆಹಾಕಿದರು. ಆರಂಭದಿಂದಲೇ ಮಿಂಚಿದ ಕೆ.ಎಲ್.ರಾಹುಲ್, 33 ಬಾಲ್ಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಮೂಲಕ 57 ರನ್ಗಳ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ(19) ಹಾಗೂ ಹಾರ್ದಿಕ್ ಪಾಂಡ್ಯ(2) ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್(50) ಹಾಗೂ ದಿನೇಶ್ ಕಾರ್ತಿಕ್(20) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆಸೀಸ್ ಪರ ಕೇನ್ ರಿಚರ್ಡ್ಸನ್ 4 ವಿಕೆಟ್ ಪಡೆದು ಮಿಂಚಿದರು.
ಫಿಂಚ್ ವ್ಯರ್ಥ ಹೋರಾಟ:
ಭಾರತ ನೀಡಿದ 187 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್(35) ಬಿರುಸಿನ ಆಟವಾಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಟೀವ್ ಸ್ಮಿತ್(11) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(23) ತಂಡಕ್ಕೆ ಆಸರೆ ಆಗಲಿಲ್ಲ. ಆದರೆ ನಂತರ ಕಣಕ್ಕಿಳಿದ ಸ್ಟಾಯ್ನಿಸ್(7), ಟಿಮ್ ಡೇವಿಡ್(5), ಜೋಶ್ ಇಂಗ್ಲಿಸ್(1), ಕಮ್ಮಿನ್ಸ್(7), ಅಗರ್(0), ಸ್ಟಾರ್ಕ್(0) ಹಾಗೂ ರಿಚರ್ಡ್ಸನ್(0) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಜವಾಬ್ದಾರಿಯಿಂದ ಆಟವಾಡಿದ ನಾಯಕ ಆರನ್ ಫಿಂಚ್(76) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಂ ಇಂಡಿಯಾದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಫಿಂಚ್, 54 ಬಾಲ್ಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 76 ರನ್ಗಳಿಸಿದರು ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಶಮಿ ಮಿಂಚಿನ ದಾಳಿ:
ಅಭ್ಯಾಸ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ(4/3) ಮಾಡಿದ ಒಂದೇ ಓವರ್ನಲ್ಲಿ ಗಮನ ಸೆಳೆದರು. ಇನ್ನಿಂಗ್ಸ್ನ 20ನೇ ಓವರ್ ಬೌಲಿಂಗ್ ಮಾಡಿದ ಶಮಿ, ಕೇವಲ 4 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಉಳಿದಂತೆ ಭುವನೇಶ್ವರ್ ಕುಮಾರ್ 2, ಅರ್ಶದೀಪ್, ಹರ್ಷಲ್ ಪಟೇಲ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದರು. ಭಾರತ ತನ್ನ ಮುಂದಿನ ಅಭ್ಯಾಸ ಪಂದ್ಯದಲ್ಲಿ ಅ.19ರಂದು ನ್ಯೂಜಿ಼ಲೆಂಡ್ ತಂಡವನ್ನ ಎದುರಿಸಲಿದೆ.